ಲಿಂಗನಮಕ್ಕಿ ಭರ್ತಿ: ನದಿ ಪಾತ್ರದ ಜನರಿಗೆ ಮತ್ತೊಮ್ಮೆ ಎಚ್ಚರಿಕೆ
ಶಿವಮೊಗ್ಗ, ಜುಲೈ.31: ಜಿಲ್ಲೆಯ ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾಶಯ ಈಗಾಗಲೇ ಶೇ.75 ಭಾಗ ತುಂಬಿರುವುದರಿಂದ ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುವ ಸಾರ್ವಜನಿಕರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕೆಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಅಧಿಕಾರಿಗಳು ಸೂಚಿಸಿದ್ದಾರೆ.
ಈ ಕುರಿತು ಎರಡನೇ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ಜಲಾಶಯದ ಮಟ್ಟ 1806.75 ಅಡಿಯಿದೆ. ಗರಿಷ್ಟ ಮಟ್ಟ 1819 ಅಡಿಗಳು. ಈ ಹಿಂದೆ ಶೇ.60 ರಷ್ಟು ತುಂಬಿದಾಗ ಇದೇ ರೀತಿ ಸೂಚನೆ ಹೊರಡಿಸಲಾಗಿತ್ತು. ಈಗ ಜಲಾಶಯ ಶೇ. 75 ರಷ್ಟು ಭಾಗ ತುಂಬಿದೆ.
ಶೇ.85 ರಷ್ಟು ಭಾಗ ಜಲಾಶಯ ತುಂಬಿದಲ್ಲಿ ನದಿ ಪಾತ್ರದ ಜನಗಳ ಹತ್ತಿರ ಹೋಗಿ ಸುರಕ್ಷಿತ ಸ್ಥಳಕ್ಕೆ ಸಾಗಲು ತಿಳಿಸುತ್ತೇವೆ. ಪತ್ರಿಕಾ ಪ್ರಕಟಣೆಯ ಜೊತೆ ಟಾಂ ಟಾಂ ಹೊಡೆಸುವುದು, ಸ್ಥಳಾಂತರಕ್ಕೆ ಸಹಾಯ ಮಾಡುವುದನ್ನು ನಾವು ಕೈಗೆತ್ತಿಕೊಳ್ಳಲಿದ್ದೇವೆ.

ಜಲಾಶಯದ ಒಳ ಹರಿವು ಈ ಹಿಂದೆ ಇದ್ದ 40 ಸಾವಿರ ಕ್ಯೂಸೆಕ್ ಗಿಂತ ಕಡಿಮೆ ಇದೆ. 13,766 ಕ್ಯುಸೆಕ್ ಇಂದು ಹರಿದು ಬರುತ್ತಿದೆ. ಇದೇ ಕ್ಯೂಸೆಕ್ ಮುಂದುವರೆದರೂ ಸಹ ಶೀಘ್ರದಲ್ಲಿಯೇ ಗರಿಷ್ಟ ಮಟ್ಟ ತಲುಪಲಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜನ ಮತ್ತು ಜಾನುವಾರುಗಳಿಗೆ ಸ್ಥಳಾಂತರಗೊಳಿಸಲು ಸೂಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications