ಕುವೆಂಪು ವಿವಿ ನಕಲಿ ಅಂಕಪಟ್ಟಿ ಹಗರಣ, ನಾಲ್ವರು ವಜಾ
ಶಿವಮೊಗ್ಗ, ಅಕ್ಟೋಬರ್ 25 : ಕುವೆಂಪು ವಿಶ್ವವಿದ್ಯಾಲಯದ ನಕಲಿ ಅಂಕಪಟ್ಟಿ, ಉತ್ತರ ಪತ್ರಿಕೆ ಬದಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ. 2012ರ ಮೇ ತಿಂಗಳಿನಲ್ಲಿ ಈ ಹಗರಣ ಬಯಲಿಗೆ ಬಂದಿತ್ತು.
ಕುವೆಂಪು ವಿಶ್ವವಿದ್ಯಾಲಯ ಸೋಮವಾರ ನಕಲಿ ಅಂಕಪಟ್ಟಿ ಮತ್ತು ಉತ್ತರ ಪತ್ರಿಕೆ ಬದಲಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಜಾಗೊಳಿಸಿ, ಮತ್ತೆ ನಾಲ್ವರಿಗೆ ಹಿಂಬಡ್ತಿ ನೀಡಿ ಆದೇಶ ಹೊರಡಿಸಿದೆ. ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಈ ಹಗರಣದ ತನಿಖೆ ನಡೆಸುತ್ತಿದ್ದರು.

ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ನಕಲಿ ಅಂಕಪಟ್ಟಿ, ಉತ್ತರ ಪತ್ರಿಕೆ ಬದಲಿ ಮತ್ತು ಅಂಕ ತಿದ್ದುತ್ತಿದ್ದ ದೊಡ್ಡ ಹಗರಣ 2012ರ ಮೇ ನಲ್ಲಿ ಬಯಲಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 9 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಾಗಿದ್ದ 9 ಮಂದಿಯಲ್ಲಿ ಒಬ್ಬರು ವಿಚಾರಣೆ ಹಂತದಲ್ಲಿಯೇ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ಉಳಿದವರ ವಿರುದ್ಧ ಅರೋಪ ಸಾಬೀತಾಗಿದ್ದು, ಕುಲಪತಿ ಪ್ರೊ.ಜೋಗನ್ ಶಂಕರ್ ಸೂಚನೆಯಂತೆ ಕುಲಸಚಿವ ಪ್ರೊ.ಎಚ್.ಎಸ್.ಭೋಜ್ಯಾನಾಯ್ಕ್ ವಜಾ ಮತ್ತು ಹಿಂಬಡ್ತಿ ಆದೇಶ ಹೊರಡಿಸಿದ್ದಾರೆ.
ವಜಾಗೊಂಡವರು : ವಿಶ್ವವಿದ್ಯಾನಿಲಯ ಪರೀಕ್ಷಾಂಗ ವಿಭಾಗದ ಕಿರಿಯ ಸಹಾಯಕರಾದ ಶಿವಕುಮಾರ್, ಸಿದ್ದಾಚಾರ್ಯ, ರಮೇಶ್ ಹಾಗೂ ಎಲ್.ರಾಮು.
ಹಿಂಬಡ್ತಿ ಪಡೆದವರು : ಸಹಾಯಕ ಕುಲಸಚಿವ ಎಂ.ಜೆ.ಪಾಲಾಕ್ಷಿನಾಯ್ಕ್, ಕಿರಿಯ ಸಹಾಯಕರಾದ ಪೀರ್ಯಾನಾಯ್ಕ್, ಎಚ್.ತಿಮ್ಮಯ್ಯ ಮತ್ತು ಮದನ್.












Click it and Unblock the Notifications