ಸಿದ್ದರಾಮಯ್ಯ ಗುಮಾಸ್ತರಂತೆ ನಡೆದುಕೊಳ್ಳುತ್ತಿದ್ದಾರೆ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ಜುಲೈ.19: ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವುದು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಅವರು ಒಬ್ಬ ಗುಮಾಸ್ತರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವನ್ನು ಎದುರಿಸುವ ಶಕ್ತಿ ಅವರಿಗಿಲ್ಲ. ನಿಭಾಯಿಸಲೂ ಬರುವುದಿಲ್ಲ. ಅವರೊಬ್ಬ ನಾಟಕ ಮಾಡುವ ನಟನಾಗಿದ್ದಾರೆ. ಅಷ್ಟೆ. ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಯಾವುದೇ ಸಮಸ್ಯೆಗಳು ಪತ್ರ ಬರೆದರೆ ಬಗೆಹರಿಯುವುದಿಲ್ಲ. ಇವರೊಬ್ಬ ಪತ್ರ ಸಿದ್ದರಾಮಯ್ಯ ಆಗಿದ್ದಾರೆ ಅಷ್ಟೆ ಎಂದು ಟೀಕಿಸಿದರು.
ರಾಜ್ಯದ ಖಜಾನೆ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನರಿಗೆ ಮಾಹಿತಿ ನೀಡಬೇಕು. ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ಮುಖಂಡ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು. ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗೊಂದಲ ತಂದುಕೊಂಡಿದೆ.

ಸರಿಯಾಗಿ ಹಣ ಇಟ್ಟುಕೊಳ್ಳದೇ ಸಾರ್ವಜನಿಕರ ಮೇಲೆ ಬರೆ ಎಳೆಯಲಾಗಿದೆ. ಪೆಟ್ರೋಲ್, ಡೀಸೆಲ್ ಮುಂತಾದ ಬೆಲೆಗಳನ್ನು ಹೆಚ್ಚಿಸಲಾಗಿದೆ. ಅತ್ತೆಯದನ್ನು ತೆಗೆದು ಅಳಿಯನಿಗೆ ಕೊಟ್ಟಂತಾಗಿದೆ ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿಯವರಿಗೆ ಬಜೆಟ್ ನ ಕಲ್ಪನೆಯೇ ಇಲ್ಲ. ಆ ಮಹತ್ವವೂ ಅವರಿಗೆ ಗೊತ್ತಿಲ್ಲ.
ಜನರಿಗೆ ಭಾರ ಮಾಡುವುದೇ ಅವರ ಗುರಿಯಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ನಿಭಾಯಿಸುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಏನೋ ಮಾಡಲು ಹೋಗಿ ಏನೋ ಮಾಡಿದ್ದಾರೆ. ಹಾಗಾಗಿ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಬೇಕು. ಹಾಗಾಗಿ ಶ್ವೇತ ಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.

ಶಿರೂರು ಸ್ವಾಮೀಜಿಗಳ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು, ಇವರ ಸಾವಿನ ಬಗ್ಗೆ ಬೇರೆ ಬೇರೆ ರೀತಿ ಅಭಿಪ್ರಾಯ ಕೇಳಿಬರುತ್ತಿವೆ. ತನಿಖೆ ನಡೆದರೆ ಸತ್ಯ ಹೊರಬರುತ್ತದೆ. ಆದರೆ ಶ್ರೀಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದರು. ಧರ್ಮದ ಪ್ರತೀಕವಾಗಿದ್ದರು. ಅದು ತುಂಬಲಾರದ ನಷ್ಟ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಸ್.ಎನ್.ಚನ್ನಬಸಪ್ಪ, ಎನ್.ಜೆ.ರಾಜಶೇಖರ್, ಹಿರಣ್ಣಯ್ಯ ಇದ್ದರು.












Click it and Unblock the Notifications