ಬಿಜೆಪಿ ನಾಯಕರ ವಿರುದ್ಧ ಈಶ್ವರಪ್ಪ ಗರಂ: ಡಿಸಿಗೆ ದೂರು

ಶಿವಮೊಗ್ಗ, ಮೇ 09: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನ ಮುಕ್ತಾಯಗೊಂಡು ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಮೇ 7ರಂದು ನಡೆದ ಚುನಾವಣೆಯಲ್ಲಿ ಶೇ 76.05ರಷ್ಟು ಮತದಾನವಾಗಿದೆ. ಮತದಾನ ಮುಗಿದ ಬಳಿಕ ಪಕ್ಷೇತರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಮೂಲಕ ಚುನಾವಣೆ ಮುಗಿದ ಮೇಲೆಯೂ ಬಿಜೆಪಿ ನಾಯಕರ ವಿರುದ್ಧ ಈಶ್ವರಪ್ಪ ಅಸಮಾಧಾನ ಮುಂದುವರೆದಿದೆ.

KS Eshwarappa Complaint To DC Upset With BJP Leaders

ಬಿ. ವೈ. ರಾಘವೇಂದ್ರ ಮತ್ತು ಬಿಜೆಪಿ ನಾಯಕರು ಚುನಾವಣೆಯಲ್ಲಿ ಸೋಲುವ ಭಯದಿಂದ ತಮ್ಮ ವಿರುದ್ಧ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ. ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆದಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಈಶ್ವರಪ್ಪ ದೂರು ಏನು?: ಪಕ್ಷೇತರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆಗೆ ದೂರು ನೀಡಿದ್ದಾರೆ. ತಮ್ಮ ಸುಳ್ಳು ಸಂದೇಶ ಹಂಚಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ತಮ್ಮ ಹಳೆಯ ಸಂದೇಶ, ಹಳೆಯ ವಿಡಿಯೋಗಳನ್ನು ಮತದಾನದ ದಿನ ಜನರ ದಾರಿ ತಪ್ಪಿಸಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮೇ 6ರಂದು ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಗೆಲ್ಲಿಸಲು ಈಶ್ವರಪ್ಪ ಕರೆ ನೀಡಿದ್ದ ಸಂದೇಶ ವೈರಲ್ ಆಗಿತ್ತು. ಮೇ 7ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನ ನಡೆದಿತ್ತು.

ಮಾಧ್ಯಮಗಳ ಜೊತೆ ಮಾತನಾಡಿದ ಕೆ. ಎಸ್. ಈಶ್ವರಪ್ಪ, "ಹಾಲಿ ಸಂಸದ, ಈ ಬಾರಿಯ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಮತ್ತು ಅವರ ಬೆಂಬಲಿಗರು ವಾಟ್ಸಪ್‌ನಲ್ಲಿ ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ. ರಾಘವೇಂದ್ರರನ್ನು ಎಲ್ಲರೂ ಬೆಂಬಲಿಸಿ ಎಂಬ ವಿಡಿಯೋವನ್ನು ಹಂಚಿದ್ದಾರೆ" ಎಂದು ಆರೋಪಿಸಿದರು.

"ರಾಘವೇಂದ್ರ ಮತ್ತು ಅವರ ಬೆಂಬಲಿಗರು ಮತದಾರರ ದಾರಿ ತಪ್ಪಿಸಲು ಇಂತಹ ಕೆಳಮಟ್ಟದ ರಾಜಕೀಯ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಲಿದೆ ಎಂದು ತಿಳಿದ ಬಳಿಕ ಇಂತಹ ರಾಜಕೀಯ ಕುತಂತ್ರ ಮಾಡಿದ್ದಾರೆ. ಇದು ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ" ಎಂದು ಈಶ್ವರಪ್ಪ ಹೇಳಿದರು.

2019ರ ಚುನಾವಣೆಯಲ್ಲಿ ಕೆ. ಎಸ್. ಈಶ್ವರಪ್ಪ ಬಿ. ವೈ. ರಾಘವೇಂದ್ರ ಬೆಂಬಲಿಸಲು ಕರೆ ನೀಡಿದ್ದ ಹಳೆಯ ವಿಡಿಯೋವನ್ನು ಈ ಬಾರಿ ಮತದಾನದ ಮುನ್ನಾ ದಿನ ಎಲ್ಲಾ ಕಡೆ ಹಂಚಿಕೆ ಮಾಡಲಾಗಿದೆ. ನನ್ನ ವಿರುದ್ಧ ತಿರುಚಿದ ಮತ್ತು ತಪ್ಪು ಸಂದೇಶ ಹಂಚಿಕೆ ಮಾಡಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ದೂರಿನಲ್ಲಿ ಮನವಿ ಮಾಡಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರದ ಟಿಕೆಟ್ ಬಿಟ್ಟುಕೊಟ್ಟಿದ್ದ ಈಶ್ವರಪ್ಪ ಈ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರಲ್ಲಿ ಪುತ್ರ ಕಾಂತೇಶ್‌ಗೆ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಪಕ್ಷ ಬಸವರಾಜ ಬೊಮ್ಮಾಯಿಯನ್ನು ಅಭ್ಯರ್ಥಿಯನ್ನಾಗಿ ಮಾಡಿತು.

ಪುತ್ರನಿಗೆ ಟಿಕೆಟ್ ಕೈತಪ್ಪಲು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಕಾರಣ ಎಂದು ಆರೋಪಿಸಿದ ಈಶ್ವರಪ್ಪ ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಬಿಜೆಪಿಯಿಂದ ಉಚ್ಛಾಟನೆಗೊಂಡರು.

ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ. ಬಿ. ವೈ. ರಾಘವೇಂದ್ರ ಬಿಜೆಪಿಯಿಂದ, ಕೆ. ಎಸ್. ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+