Krishi Mela: ಶಿವಮೊಗ್ಗದಲ್ಲಿ ಅ. 18ರಿಂದ ಕೃಷಿ ಮೇಳ, ವಿಶೇಷತೆಗಳು

ಶಿವಮೊಗ್ಗ, ಅಕ್ಟೋಬರ್ 17: ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕಾ ಮೇಳ-2024ಕ್ಕೆ ದಿನಾಂಕ ನಿಗದಿಯಾಗಿದೆ. ನವುಲೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ ನಡೆಯಲಿದ್ದು, ಹಲವಾರು ವಿಶೇಷತೆಗಳಿವೆ. ಅಡಿಕೆ ಬೆಳೆಗಾರರನ್ನು ಗಮನದಲ್ಲಿಟ್ಟುಕೊಂಡು ಅಡಿಕೆ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ, ಅಡಿಕೆ ಉಪ ಉತ್ಪನ್ನಗಳ ಸದ್ಬಳಕೆ, ಅಡಿಕೆ ಮಾರುಕಟ್ಟೆ ವ್ಯವಸ್ಥೆ ಮತ್ತು ಮೌಲ್ಯವರ್ಧನೆ ಮತ್ತಿತರ ವಿಷಯಗಳ ಬಗ್ಗೆ ರೈತರ ಜೊತೆ ಸಂವಾದವನ್ನು ಆಯೋಜಿಸಲಾಗಿದೆ.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಕುಲಪತಿ ಡಾ. ಆರ್. ಸಿ. ಜಗದೀಶ್ ಕೃಷಿ ಮೇಳದ ಕುರಿತು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 18ರಿಂದ 21ರ ತನಕ ಕೃಷಿ ಮತ್ತು ತೋಟಗಾರಿಕಾ ಮೇಳ-2024 ಅನ್ನು 'ಪೌಷ್ಠಿಕ ಆಹಾರಕ್ಕಾಗಿ ವಿಕಸಿತ ಕೃಷಿ' ಎಂಬ ಘೋಷಣೆಯೊಂದಿಗೆ ಆಯೋಜಿಸಲಾಗಿದೆ.

Krishi Mela 2024 At Shivamogga From October 18

ಕೃಷಿ ಮೇಳದ ವಿಶೇಷತೆಗಳು: ಈ ಬಾರಿಯ ಕೃಷಿ ಮೇಳ ಹಲವು ವಿಶೇಷತೆಳನ್ನು ಒಳಗೊಂಡಿದೆ. ವಿಶೇಷವಾಗಿ ಈ ಮೇಳದಲ್ಲಿ ತಂತ್ರಜ್ಞಾನ ಉದ್ಯಾನವನ, ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ಹೈ-ಟೆಕ್ ತೋಟಗಾರಿಕೆ-ಹೈಡೋಫೋನಿಕ್ ಕೃಷಿ, ಪುಷ್ಪ ಕೃಷಿ, ಜೇನು ಸಾಕಾಣಿಕೆ ಮತ್ತು ಕೀಟ ಪ್ರಪಂಚ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ, ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಾವಯವ ಕೃಷಿ, ಅಣಬೆ ಬೇಸಾಯ, ಸಮಗ್ರ ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳ ಮಾಹಿತಿ ನೀಡಲಾಗುತ್ತದೆ.

ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು, ಹವಾಮಾನ ಆಧಾರಿತ ಕೃಷಿ, ಅಡಿಕೆಯಲ್ಲಿ ಬಹುಸ್ತರೀಯ ಪದ್ಧತಿ, ಅಡಿಕೆ ಬೆಳೆಯ ಸಮಗ್ರ ಕೃಷಿ ಪದ್ಧತಿ, ಪಾರಂಪರಿಕ ಅಡಿಕೆ ಸಂಸ್ಕರಣಾ ಕ್ರಮಗಳು, ಅಡಿಕೆಯ ವಿವಿಧ ತಳಿಗಳು, ಅಡಿಕೆ ಸಂಸ್ಕರಣೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು, ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಅಲ್ಲದೇ ಶ್ರೇಷ್ಠ ರೈತ ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಕೃಷಿ ಮೇಳದ ತಾಂತ್ರಿಕ ಸಮಾವೇಶದಲ್ಲಿ ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆಯನ್ನು ಕೊಡಿಸಲಾಗುತ್ತದೆ. ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಜಿಲ್ಲೆಯ ಅಡಿಕೆ ಬೆಳೆಗಾರರನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 18ರಂದು ತಾಂತ್ರಿಕ ಸಮಾವೇಶ ಆಯೋಜಿಸಲಾಗಿದೆ. ವಿಕಸಿತ ಕೃಷಿಯಲ್ಲಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ, ಅಡಿಕೆ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ, ಅಡಿಕೆ ಉಪಉತ್ಪನ್ನಗಳ ಸದ್ಬಳಕೆ, ಅಡಿಕೆ ಮಾರುಕಟ್ಟೆ ವ್ಯವಸ್ಥೆ ಮತ್ತು ಮೌಲ್ಯವರ್ಧನೆ ಮತ್ತಿತರ ವಿಷಯಗಳ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದ ಏರ್ಪಡಿಸಲಾಗಿದೆ.

ಡಾ. ಆರ್. ಸಿ. ಜಗದೀಶ್ ಮಾತನಾಡಿ, "ಕೃಷಿಯಿಂದ ಪೋಷಕಾಂಶ-ಭರಿತ ಉತ್ಪಾದಕತೆ ಮತ್ತು ಗುಣಮಟ್ಟವನ್ನು ಸುಧಾರಿಸುವ ಮೇಲೆ ಕೇಂದ್ರೀಕರಿಸುವ ಕೃಷಿ ಮತ್ತು ಆಹಾರ ಉತ್ಪಾದನಾ ನೀತಿಗಳು ಅವುಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಇದಲ್ಲದೆ, ಈ ಸಮೃದ್ಧ ಪೌಷ್ಟಿಕಾಂಶದ ಪದಾರ್ಥಗಳನ್ನು ಸೇವಿಸುವ ಜನರು ತಮ್ಮ ಪೌಷ್ಟಿಕಾಂಶವನ್ನು ಸುಧಾರಿಸಲು ಮತ್ತು ಆರೋಗ್ಯಕರವಾಗಿ ಬದುಕಲು ನಾಗರಿಕರಿಗೆ ಸಹಾಯ ಮಾಡುತ್ತದೆ"ಎಂದರು.

"ಆಹಾರವು ಕೃಷಿ ಪದ್ಧತಿಗಳ ಪ್ರಮುಖ ಉಪ ಉತ್ಪನ್ನವಾಗಿದೆ ಮತ್ತು ಇದರ ಪರಿಣಾಮವಾಗಿ, ಆರೋಗ್ಯಕರ ಪೋಷಣೆಯ ಪ್ರಮುಖ ಅಂಶವಾಗಿದೆ ಹೆಚ್ಚಿನ ಪುರಾವೆಗಳು, ಸಂಶೋಧನೆಯು ಕೇವಲ ಆಹಾರವನ್ನು ಹೊಂದಿರುವುದಕ್ಕಿಂತ ಹೆಚ್ಚಿನ ಪೋಷಣೆಯಿದೆ ಎಂದು ತೋರಿಸುತ್ತದೆ. ಜನರು ಸೇವಿಸುವ ಆಹಾರವು ಪೌಷ್ಟಿಕವಾಗಿರಬೇಕು ಅಂದರೆ, ಆಹಾರವು ಸರಿಯಾದ ಬೆಳವಣಿಗೆ ಮತ್ತು ಬೆಳವಣಿಗೆಗೆ ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಅಂಶಗಳನ್ನು ಮತ್ತು ಪೋಷಣೆಯನ್ನು ಹೊಂದಿರುತ್ತದೆ" ಎಂದು ತಿಳಿಸಿದರು.

"ನಾವು ಸೇವಿಸುವ ಆಹಾರವು ಸರಿಯಾದ ಪೋಷಕಾಂಶಗಳೊಂದಿಗೆ ಸಮತೋಲನದಲ್ಲಿರಬೇಕು. ಈ ಸಂದರ್ಭದಲ್ಲಿ ಅತಿ ಹೆಚ್ಚು ಸೂಕ್ತ ರಾಗಿ, ಜೋಳ, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ವಿಕಸಿತ ಕೃಷಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬಂತಹ ವಿಚಾರಗಳನ್ನು ಈ ಕೃಷಿ-ತೋಟಗಾರಿಕೆ ಮೇಳದಲ್ಲಿ ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದ್ದೇವೆ" ಎಂದರು.

ಅಕ್ಟೋಬರ್ 19ರಂದು ಸಧೃಡ ಭಾರತಕ್ಕಾಗಿ ವಿಕಸಿತ ಕೃಷಿ, ಕೃಷಿಯಲ್ಲಿ ಸುಸ್ಥಿರತೆಗೆ ಅರಣ್ಯ ಕೃಷಿ, ಪಶು ಸಂಗೋಪನೆ-ಆಹಾರ ಭದ್ರತೆ, ಕೃಷಿಯಲ್ಲಿ ಡೋನ್ ಬಳಕೆ. ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ವಿಷಯಗಳ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಏರ್ಪಡಿಸಲಾಗಿದೆ.

ಅಕ್ಟೋಬರ್ 20ರಂದು ವೈಜ್ಞಾನಿಕ ಶುಂಠಿ ಮತ್ತು ಕಾಳುಮೆಣಸು ಕೃಷಿ, ಕಾಳುಮೆಣಸು ಕೃಷಿ- ರೈತರ ಅನುಭವ, ಗೋಡಂಬಿ ಬೆಳೆ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ಕೃಷಿ ನವೋದ್ಯಮ ಮತ್ತು ಸೆಕೆಂಡರಿ ಕೃಷಿ, ಸಾಂಬಾರು ಬೆಳೆಗಳ ಮೌಲ್ಯವರ್ಧನೆ ವಿಷಯಗಳ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಆಯೋಜನೆ ಮಾಡಲಾಗಿದೆ.

ರೈತ ಸಮೂಹಕ್ಕೆ ಮಾಹಿತಿಗಾಗಿ ವಿವಿಧ ಬೆಳೆ ಮತ್ತು ತಾಂತ್ರಿಕತೆಗಳನ್ನು ಹೊತ್ತ ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆ ಮಾಡಲಾತ್ತದೆ. ಅಲ್ಲದೇ ಕೃಷಿ ಪರಿಕರ ವಿತರಕರು, ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಏರ್ಪಡಿಸಲಾಗಿದೆ. ಈ ಮೇಳದಲ್ಲಿ ಮೀನುಗಾರಿಕೆ, ಯಂತ್ರೋಪಕರಣಗಳು, ಪಶು ಸಂಗೋಪನೆ ಸೇರಿದಂತೆ ವಿವಿಧ ರೀತಿಯ 200ಕ್ಕೂ ಹೆಚ್ಚಿನ ಮಳಿಗೆಗಳು ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+