ತೀರ್ಥಹಳ್ಳಿ : 2ನೇ ದಿನಕ್ಕೆ ಕಾಲಿಟ್ಟ ಕಿಮ್ಮನೆ ಪಾದಯಾತ್ರೆ
ಶಿವಮೊಗ್ಗ, ಮಾರ್ಚ್ 20 : 'ಜನ ಜಾಗೃತಿ' ಹೆಸರಿನಲ್ಲಿ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಪಾದಯಾತ್ರೆ ಎರಡು ದಿನಗಳನ್ನು ಪೂರ್ಣಗೊಳಿಸಿದ್ದು ಮಾ.21ರಂದು ಸಮಾರೋಪ ಸಮಾರಂಭ ನಡೆಯಲಿದೆ.
ಕಲ್ಲುಕೊಪ್ಪ-ಕರಕುಚ್ಚಿಯಿಂದ ತೀರ್ಥಹಳ್ಳಿ ಪಟ್ಟಣದ ತನಕ ಮೂರು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಮಂಗಳವಾರಕ್ಕೆ ಪಾದಯಾತ್ರೆ ಎರಡು ದಿನಗಳನ್ನು ಪೂರೈಸಿದೆ. ತೀರ್ಥಹಳ್ಳಿಯಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಬೃಹತ್ ಸಮಾವೇಶ ನಡೆಯಲಿದ್ದು, ಪಾದಯಾತ್ರೆ ಅಂತ್ಯಗೊಳ್ಳಲಿದೆ.
ಸಮಾರೋಪ ಸಮಾರಂಭದಲ್ಲಿ ಸಚಿವರಾದ ಕಾಗೋಡು ತಿಮ್ಮಪ್ಪ, ಪ್ರಿಯಾಂಕ ಖರ್ಗೆ, ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಬೃಹತ್ ಸಮಾವೇಶದ ಮೂಲಕ ಚುನಾವಣೆ ಹೊಸ್ತಿಲಲ್ಲಿ ಕಿಮ್ಮನೆ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ, ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿರುವ 62 ಕೋಟಿ ರೂ. ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕಿಮ್ಮನೆ ರತ್ನಾಕರ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ.

ತೀರ್ಥಹಳ್ಳಿ ಕ್ಷೇತ್ರದ ರಾಜಕಾರಣ ಕಾವು ಪಡೆದುಕೊಳ್ಳುತ್ತಿದೆ. ಹಾಲಿ ಶಾಸಕ ಕಿಮ್ಮನೆ ರತ್ನಾಕರ ಅವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಬಿಜೆಪಿಯಿಂದ ಆರಗ ಜ್ಞಾನೇಂದ್ರ, ಜೆಡಿಎಸ್‌ನಿಂದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರು ಅಭ್ಯರ್ಥಿಗಳಾಗಿದ್ದಾರೆ.












Click it and Unblock the Notifications