ಹೊಸ ಇತಿಹಾಸದ ಪುಟ ತೆರೆಯಲಿದೆ; ಆಯನೂರು ಮಂಜುನಾಥ್
ಶಿವಮೊಗ್ಗ, ಮೇ 11; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಮುಕ್ತಾಯಗೊಂಡಿದೆ. ಶನಿವಾರ ನಡೆಯಲಿರುವ ಮತ ಎಣಿಕೆ ಮೇಲೆ ಎಲ್ಲರ ಗಮನವಿದೆ. ಚುನಾವಣೋತ್ತರ ಸಮೀಕ್ಷೆಗಳ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಲಿದೆ. ಆದರೆ ಸ್ಪಷ್ಟ ಬಹುಮತ ಬರಲಿದೆಯೇ? ಎಂದು ಕಾದು ನೋಡಬೇಕಿದೆ.
ಅತಂತ್ರ ಫಲಿತಾಂಶ ಬರಲಿದೆ? ಎಂಬ ಲೆಕ್ಕಾಚಾರ ಇದೆ. ಆದ್ದರಿಂದ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಜೆಡಿಎಸ್‌ನ ಅಭ್ಯರ್ಥಿಗಳು ಸಹ ಇದೇ ಮಾತನ್ನು ಹೇಳುತ್ತಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್, "ಹೊಸ ಇತಿಹಾಸದ ಪುಟ ತೆರೆಯಲಿದೆ" ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಆಯನೂರು ಮಂಜುನಾಥ್, "ರಾಜ್ಯದಲ್ಲಿ ಈ ಬಾರಿ ಅತಂತ್ರ ಫಲಿತಾಂಶ ಬರಲಿದೆ. ಸರ್ಕಾರ ರಚನೆಯಲ್ಲಿ ಜೆಡಿಎಸ್ ಪಕ್ಷ ಪ್ರಮುಖ ಪಾತ್ರ ವಹಿಸಲಿದೆ. ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಗೆದ್ದು ಇತಿಹಾಸ ಸೃಷ್ಟಿ ಮಾಡಲಿದೆ. ಶಾಂತಿ, ಸೌಹಾರ್ದತೆ, ಅಭಿವೃದ್ಧಿ ಮೇಲೆ ಚುನಾವಣೆ ಮಾಡಿದ್ದೇವೆ" ಎಂದರು.
"ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ನನಗೆ ಸಹಾಯ ಮಾಡಿದ್ದಾರೆ. ಹೊಸ ಇತಿಹಾಸದ ಪುಟ ತೆರೆಯುವ ವಿಶ್ವಾಸವಿದೆ. ಯಡಿಯೂರಪ್ಪರನ್ನು ಜಾತಿಗೆ ಸೀಮಿತ ಮಾಡಿ ಅಪಪ್ರಚಾರ ಮಾಡಿದ್ದಾರೆ. ಕೆ. ಎಸ್. ಈಶ್ವರಪ್ಪಗೆ ಯಾವುದೇ ಸಾಮರ್ಥ್ಯ ಇಲ್ಲ" ಎಂದು ಹೇಳಿದರು.

ಗೆಲ್ಲಿಸುವ ಶಕ್ತಿ ಇಲ್ಲ; ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಚನ್ನಬಸಪ್ಪ (ಚನ್ನಿ). ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಬಳಿಕ ಚನ್ನಬಸಪ್ಪ (ಚನ್ನಿ)ಗೆ ಪಕ್ಷ ಟಿಕೆಟ್ ನೀಡಿದೆ. ಆಯನೂರು ಮಂಜುನಾಥ್ ಕೆ. ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಕೆ. ಎಸ್. ಈಶ್ವರಪ್ಪಗೆ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ಇಲ್ಲ" ಎಂದು ಟೀಕಿಸಿದ್ದಾರೆ.
ಆಯನೂರು ಮಂಜುನಾಥ್ ವಿಧಾನ ಪರಿಷತ್ ಸದಸ್ಯರಾಗಿದ್ದರು. ಶಿವಮೊಗ್ಗ ನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಕೈತಪ್ಪುವ ಸೂಚನೆ ಸಿಕ್ಕ ತಕ್ಷಣ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು ಮತ್ತು ಬಿಜೆಪಿ ತೊರೆದು ಜೆಡಿಎಸ್ ಸೇರಿದರು. ಪಕ್ಷ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತು.
ಮತ್ತೊಂದು ಕಡೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ ಸಹ ಟಿಕೆಟ್ ಕೈತಪ್ಪಿದ ಬಳಿಕ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದರು. ಆದ್ದರಿಂದ ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಪ್ರಭಾವ ಹೆಚ್ಚಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿ ನಾಯಕರು ಇದ್ದಾರೆ.
ಕೆ. ಎಸ್. ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಬಳಿಕ ಅವರ ಪುತ್ರ ಕೆ. ಈ. ಕಾಂತೇಶ್‌ಗೆ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ಬಿಜೆಪಿ ಅವರಿಗೆ ಟಿಕೆಟ್ ನೀಡಲಿಲ್ಲ. ಆದ್ದರಿಂದ ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.
ಮತ್ತೊಂದು ಕಡೆ ಬಾಗಲಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವರಾಜ್ ಪಾಟೀಲ್ ಸಹ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ, "ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆಗುವುದು ಗ್ಯಾರಂಟಿ. ಎಚ್. ಡಿ. ಕುಮಾರಸ್ವಾಮಿ ಅವರೇ ಕಿಗ್ ಮೇಕರ್ ಆಗಿತ್ತಾರೆ. ರಾಜ್ಯದ ಜನರು ಪ್ರಾದೇಶಿಕ ಪಕ್ಷಕ್ಕೆ ಆದ್ಯತೆ ಕೊಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಬಗ್ಗೆ ಜನರಿಗೆ ಒಲವು ಜಾಸ್ತಿ ಇದೆ" ಎಂದು ಹೇಳಿದರು.












Click it and Unblock the Notifications