ಪಕ್ಷದ ಅಧಿಕೃತ ಅಭ್ಯರ್ಥಿಯನ್ನೇ ಉಚ್ಛಾಟನೆ ಮಾಡಿದ ಜೆಡಿಎಸ್!
ಶಿವಮೊಗ್ಗ, ಮೇ 12; ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಜೆಡಿಎಸ್ ಈ ಬಾರಿಯ ಚುನಾವಣೆಯ ಪಕ್ಷದ ಅಧಿಕೃತ ಅಭ್ಯರ್ಥಿಯನ್ನೇ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ನಡೆದಿದ್ದು, ಮೇ 13ರ ಶನಿವಾರ ಫಲಿತಾಂಶ ಘೋಷಣೆಯಾಗಲಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆಗೆ ಸೈಯದ್ ಜಾಕೀರ್ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಅವರು ನಾಮಪತ್ರವನ್ನು ಸಹ ಸಲ್ಲಿಕೆ ಮಾಡಿದ್ದರು. ಆದರೆ ಮೇ 9ರಂದು ಅವರು ಕಣದಿಂದ ಹಿಂದೆ ಸರಿದಿದ್ದರು.

"ನಾನು ಯಾವುದೇ ಒತ್ತಡಕ್ಕೆ ಮಣಿದು ಚುನವಣಾ ಕಣದಿಂದ ಹಿಂದೆ ಸರಿಯುತ್ತಿಲ್ಲ. ಪಕ್ಷದ ಅಧ್ಯಕ್ಷರಾದ ಸಿಎಂ ಇಬ್ರಾಹಿಂ ಮತ್ತು ವೈಎಸ್‌ವಿ ದತ್ತಾರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದೆ. ಆದರೆ ಅವರು ಸಿಗಲಿಲ್ಲ" ಎಂದು ಸೈಯದ್ ಜಾಕೀರ್ ಹೇಳಿದ್ದರು.
ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪರಿಂದ ಹಣ ಪಡೆದು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿಗಳನ್ನು ಸೈಯದ್ ಜಾಕೀರ್ ತಳ್ಳಿ ಹಾಕಿದ್ದರು. ಜ್ಯಾತ್ಯಾತೀತ ಶಕ್ತಿಗಳೆಲ್ಲವೂ ಒಂದಾಗಿ ಇರಬೇಕು ಎಂದು ತಿಳಿಸಿದ್ದರು.

ಆರೋಗ್ಯದ ಕಾರಣ; ಚುನಾವಣಾ ಕಣದಿಂದ ಹಿಂದೆ ಸರಿಯಲು ಆರೋಗ್ಯ ಕಾರಣ ಎಂದು ಸೈಯದ್ ಜಾಕೀರ್ ಹೇಳಿದ್ದರು. ಸೋಮವಾರ ಚುನಾವಣಾ ಕಣದಿಂದ ಹಿಂದೆ ಸರಿಯುವ ತೀರ್ಮಾನ ಪ್ರಕಟಿಸಿದ ಅವರು, ಬುಧವಾರ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬೇಳೂರು ಗೋಪಾಲಕೃಷ್ಣಗೆ ಬೆಂಬಲ ಘೋಷಣೆ ಮಾಡಿದ್ದರು.
ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ ಬಳಿಕ ಸೈಯದ್ ಜಾಕೀರ್ ಬೇಳೂರು ಗೋಪಾಲಕೃಷ್ಣ ಪರವಾಗಿ ಮನೆ-ಮನೆ ಪ್ರಚಾರದಲ್ಲಿಯೂ ತೊಡಗಿಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಕಾರಣಕ್ಕೆ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.
ಸಾಗರ ತಾಲೂಕು ಜೆಡಿಎಸ್ ಅಧ್ಯಕ್ಷ ಕನ್ನಪ್ಪ ಬೆಳಲಮಕ್ಕಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದ ಸೈಯದ್ ಜಾಕೀರ್ ಬಳಿಕ ಕಾಂಗ್ರೆಸ್ ಬೆಂಬಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದು, ಜೆಡಿಎಸ್ ಪಕ್ಷಕ್ಕೆ ಬಗೆದಿರುವ ದ್ರೋಹ ಎಂದು ಹೇಳಿದ್ದಾರೆ.
ಸಾಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಭದ್ರವಾದ ನೆಲೆ ಇಲ್ಲ ಎನ್ನಬಹುದು. 2013ರಲ್ಲಿ ಬೇಳೂರು ಗೋಪಾಲಕೃಷ್ಣ ಪಕ್ಷದ ಅಭ್ಯರ್ಥಿಯಾಗಿದ್ದರು 23,217 ಮತಗಳನ್ನು ಪಡೆದಿದ್ದರು. 2018ರಲ್ಲಿ ಎಂ. ಬಿ. ಗಿರೀಶ್ ಗೌಡ ಅಭ್ಯರ್ಥಿಯಾಗಿದ್ದರು.
9 ಅಭ್ಯರ್ಥಿಗಳು; ಈ ಬಾರಿಯ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಜೆಡಿಎಸ್‌ನ ಸೈಯದ್ ಜಾಕೀರ್ ಸೇರಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಹರತಾಳು ಹಾಲಪ್ಪ, ಕಾಂಗ್ರೆಸ್‌ನಿಂದ ಬೇಳೂರು ಗೋಪಾಕೃಷ್ಣ ಕಣದಲ್ಲಿರುವ ಪ್ರಮುಖರು. ಮೇ 10ರಂದು ಮತದಾನ ಮುಕ್ತಾಯಗೊಂಡಿದ್ದು, ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಶನಿವಾರ ಮತ ಎಣಿಕೆ ನಡೆಯಲಿದೆ.












Click it and Unblock the Notifications