Bhadravathi constituency; ಬಿಜೆಪಿಯ ಪ್ರಭಾವವೇ ಇಲ್ಲದ ಕ್ಷೇತ್ರವಿದು!

ಶಿವಮೊಗ್ಗ ನಗರದಿಂದ ಕೂಗಳತೆ ದೂರದಲ್ಲಿರುವ ಶಿವಮೊಗ್ಗ, ಚಿಕ್ಕಮಗಳೂರು ಜೊತೆ ಗಡಿ ಹಂಚಿಕೊಂಡಿರುವ ತಾಲೂಕು ಕೇಂದ್ರ ಭದ್ರಾವತಿ. ಹಿಂದೆ ಖ್ಯಾತ ಕೈಗಾರಿಕಾ ಪ್ರದೇಶವಾಗಿದ್ದ ಭದ್ರಾವತಿಯಲ್ಲಿ ಈಗ ಹಲವು ಕಾರ್ಖಾನೆಗಳು ಮುಚ್ಚಿವೆ. ಲಿಂಗಾಯತರು, ಒಕ್ಕಲಿಗರು, ಮುಸ್ಲಿಮರು ಹೆಚ್ಚಾಗಿ ಇರುವ ಕ್ಷೇತ್ರವಿದು. ಕೈಗಾರಿಕಾ ವಲಯವಾಗಿರುವ ಕಾರಣ ವಲಸಿಗರು ಹೆಚ್ಚಿದ್ದಾರೆ. ಉತ್ತಮವಾದ ರೈಲು, ಬಸ್ ಸಂಪರ್ಕ ಹೊಂದಿದೆ. ರೇಡಿಯೋ ಕೇಂದ್ರವೂ ಇಲ್ಲಿದೆ. ನಗರದಲ್ಲಿಯೇ ಭದ್ರಾ ನದಿ ಹರಿಯುತ್ತದೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯ ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖನೆ ಸ್ಥಾಪನೆ ಮಾಡಿದರು. ಹಲವು ಕುಟುಂಬಗಳಿಗೆ ಆಧಾರವಾಗಿದ್ದ ಕಾರ್ಖಾನೆ ಅವಸಾನದ ಅಂಚಿನಲ್ಲಿದೆ. ವಿಐಎಸ್‌ಎಲ್ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಿ ಕಾರ್ಮಿಕರು ನಡೆಸುತ್ತಿರುವ ಹೋರಾಟ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ವಿಚಾರವಾಗಲಿದೆ ಎಂದು ಅಂದಾಜಿಸಲಾಗಿದೆ. ಪಟ್ಟಣ್ಣದಲ್ಲಿದ್ದ ಎಂಪಿಎಂ ಈಗಾಗಲೇ ಬಾಗಿಲು ಹಾಕಿದೆ.

bhadravati constituency map

ಮಾಜಿ ಕ್ರಿಕೆಟರ್ ಜಿ. ಆರ್. ವಿಶ್ವನಾಥ್, ಹಿರಿಯ ನಟ ದೊಡ್ಡಣ್ಣ, ನಿರ್ದೇಶನ ಎಸ್. ನಾರಾಯಣ್, ನಟಿ ಆಶಾ ಭಟ್ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳ ತವರೂರು ಭದ್ರಾವತಿ. ಕೇಂದ್ರದ ಮಾಜಿ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಅವರು ಸಹ ಇಲ್ಲಿಯವರೇ 2013ರ ಚುನಾವಣೆಯಲ್ಲಿ ಸಿ. ಎಂ. ಇಬ್ರಾಹಿಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 22,329 ಮತಗಳನ್ನು ಪಡೆದು, ಜೆಡಿಎಸ್‌ನ ಅಪ್ಪಾಜಿ ಗೌಡ ವಿರುದ್ಧ ಸೋಲು ಕಂಡಿದ್ದರು. ಠೇವಣಿಯನ್ನು ಸಹ ಕಳೆದುಕೊಂಡರು.

ಬಿಜೆಪಿ ಬಾವುಟ ಹಾರಲೇ ಇಲ್ಲ; ಶಿವಮೊಗ್ಗ ಜಿಲ್ಲೆ ಬಿಜೆಪಿಯ ಶಕ್ತಿ ಕೇಂದ್ರ. ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು 7, ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಆದರೆ ಅಚ್ಚರಿ ಎಂಬಂತೆ ಬಿಜೆಪಿಯ ಪ್ರಭಾವವೇ ಇಲ್ಲದ ಕ್ಷೇತ್ರ ಭದ್ರಾವತಿ. ಮೊದಲಿನಿಂದಲೂ ಇಲ್ಲಿ ಬಿಜೆಪಿ ಗೆದ್ದಿಲ್ಲ, ರಾಜಕೀಯದ ಆಳ ತಿಳಿದವರು ಗೆಲ್ಲುವುದೂ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ. ಪಕ್ಷಕ್ಕಿಂತ ವ್ಯಕ್ತಿ ರಾಜಕೀಯವೇ ಭದ್ರಾವತಿಯಲ್ಲಿ ಮುಖ್ಯ. ಆದರೆ ಕಳೆದ ಎಲ್ಲಾ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ನ ಬಿ. ಕೆ. ಸಂಗಮೇಶ್ವರ, ಜೆಡಿಎಸ್‌ನ ದಿ. ಅಪ್ಪಾಜಿ ಗೌಡ ತಲಾ ಮೂರು ಬಾರಿ ಕ್ಷೇತ್ರದಲ್ಲಿ ಗೆದಿದ್ದಾರೆ. ಹಾಲಿ ಶಾಸಕರು ಬಿ. ಕೆ. ಸಂಗಮೇಶ್ವರ. 2020ರಲ್ಲಿ ಅಪ್ಪಾಜಿ ಗೌಡರು ವಿಧಿವಶರಾದರು. ಅವರು ಇಲ್ಲದೇ ನಡೆಯುತ್ತಿರುವ ಮೊದಲ ಚುನಾವಣೆ ಇದು. ಅಪ್ಪಾಜಿ ಗೌಡರ ಪತ್ನಿ ಶಾರದಾ ಅಪ್ಪಾಜಿ ಗೌಡ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆಯಾಗಿ ವರ್ಷಗಳು ಕಳೆದಿವೆ.

bhadravati congress mla bk sangameshwara

ಆರಂಭದಿಂದಲೂ ಭದ್ರಾವತಿ ಕಾಂಗ್ರೆಸ್ ಭದ್ರಕೋಟೆ. ಬಳಿಕ ಕಾರ್ಮಿಕ ಹೋರಾಟಗಳ ಮೂಲಕ ಮುಂಚೂಣಿಗೆ ಬಂದು ಮೂರು ಬಾರಿ ಗೆದ್ದರು ಅಪ್ಪಾಜಿ ಗೌಡ. 1994ರ ಚುನಾವಣೆಯಲ್ಲಿ ಅಪ್ಪಾಜಿ ಗೌಡ, ಬಿ. ಕೆ. ಸಂಗಮೇಶ್ವರ ನಡುವೆ ನೇರ ಪೈಪೋಟಿ ನಡೆಯಿತು. ಈ ಬಾರಿ ಭದ್ರಾವತಿ ಗೆಲ್ಲಲೇಬೇಕು ಎಂದು ಬಿಜೆಪಿ ಬಯಸಿದೆ. ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಮಲ ಆರಳಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳುತ್ತಲೇ ಇದ್ದಾರೆ. ಆದರೆ ಭದ್ರಾವತಿ ಕೈ ಕೊಡುತ್ತಲೇ ಇದೆ.

1994ರಲ್ಲಿ ಬಿಜೆಪಿ ಅಭ್ಯರ್ಥಿ ನವೀನ್ ಕ್ಷೇತ್ರದಲ್ಲಿ 16,830 ಮತಗಳನ್ನು ಪಡೆದಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಡೆದ ಅತಿ ಹೆಚ್ಚು ಮತಗಳಿವು ಎಂದರೆ ಬಿಜೆಪಿ ಪ್ರಭಾವ ಎಷ್ಟಿದೆ? ಎಂದು ನೀವು ಲೆಕ್ಕಾಚಾರ ಹಾಕಬಹುದಾಗಿದೆ. 2020ರಲ್ಲಿ ಕೋವಿಡ್‌ನಿಂದಾಗಿ ಅಪ್ಪಾಜಿ ಗೌಡ ವಿಧಿವಶರಾದರು. ಅವರ ಪತ್ನಿ ಶಾರಾದಾ ಅಪ್ಪಾಜಿ ಗೌಡರನ್ನು ಬಿಜೆಪಿ ಅಭ್ಯರ್ಥಿ ಮಾಡುತ್ತದೆ ಎಂಬ ಮಾತುಗಳು ಕೇಳಿ ಬಂದವು. ಆದರೆ ಜೆಡಿಎಸ್ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಅವರು ಸಕ್ರಿಯರಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ಅಪ್ಪಾಜಿ ಗೌಡರ ಆಪ್ತ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್‌ರನ್ನು ಬಿಜೆಪಿಗೆ ಸೆಳೆಯಲು ಪಕ್ಷ ಯಶಸ್ವಿಯಾಗಿದೆ. ಈ ಬಾರಿ ಅವರಿಗೆ ಟಿಕೆಟ್ ಎಂಬ ಮಾತಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಬಿ. ಕೆ. ಸಂಗಮೇಶ್ವರ ಕಣಕ್ಕಿಳಿಯಬಹುದು, ಇಲ್ಲವಾದಲ್ಲಿ ಸಹೋದರ ಅಥವ ಪುತ್ರನನ್ನು ಕಣಕ್ಕಿಳಿಸಬಹುದು. ಆಮ್‌ ಆದ್ಮಿ ಸೇರಿದಂತೆ ಪಕ್ಷೇತರರು ಕಣಕ್ಕಿಳಿದರೂ ಯಾವುದೇ ಪ್ರಯೋಜನವಿಲ್ಲ, ಭಾರೀ ಪೈಪೋಟಿ ನಿರೀಕ್ಷೆ ಮಾಡುವುದು ಕಷ್ಟ ಎಂಬುದು ಜನರಿಗೂ ತಿಳಿದಿದೆ.

ಭದ್ರಾವತಿಯಲ್ಲಿ ಈಗ ಕಾರ್ಮಿಕರಿಲ್ಲ, ಕಾರ್ಮಿಕರ ನಾಯಕರಾಗಿದ್ದ ಅಪ್ಪಾಜಿ ಗೌಡರು ಇಲ್ಲ. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳು ಇಲ್ಲದ ಹಳ್ಳಿಗಳು ಇವೆ. 7 ಚುನಾವಣೆಯಲ್ಲಿ ಕಣಕ್ಕಿಳಿದು ಮೂರು ಬಾರಿ ಗೆದ್ದಿದ್ದ ದಿ. ಅಪ್ಪಾಜಿ ಗೌಡರ ಪತ್ನಿ ಜೆಡಿಎಸ್‌ನ ಶಾರಾದಾ ಅಪ್ಪಾಜಿ ಗೌಡ ಜನತಾ ಜಲಧಾರೆ ಮತ್ತು ಪಂಚರತ್ನ ಯಾತ್ರೆಗಳನ್ನು ಕ್ಷೇತ್ರದಲ್ಲಿ ಯಶಸ್ವಿಯಾಗಿ ಸಂಘಟಿಸಿದ್ದಾರೆ. ಈ ಮೂಲಕ ಈ ಬಾರಿ ಸ್ಪರ್ಧೆ ವಿಭಿನ್ನವಾಗಿರಲಿದೆ ಎಂಬ ಸಂದೇಶ ಕೊಟ್ಟಿದ್ದಾರೆ. ತಮ್ಮ ಕುಟುಂಬದ ಮೇಲೆ ಅಟ್ರಾಸಿಟಿ ಕೇಸು ದಾಖಲಾಗಲು ಯಡಿಯೂರಪ್ಪ ಕಾರಣ ಎಂದು ಶಾಸಕ ಬಿ. ಕೆ. ಸಂಗಮೇಶ್ವರ ಸದನದಲ್ಲಿ ಅಂಗಿ ಕಳಚಿ ಪ್ರತಿಭಟಿಸಿ ದೊಡ್ಡ ಸುದ್ದಿ ಮಾಡಿದ್ದರು.

ಮುಸ್ಲಿಮರು ಬಿಜೆಪಿ ಬೆಂಬಲಿಸದ ಕಾರಣ, ಯಡಿಯೂರಪ್ಪ ಈ ಬಾರಿ ಚುನಾವಣೆಗೆ ಸ್ಪರ್ಧಿಸದಿರುವ ಕಾರಣ ಈ ಬಾರಿಯೂ ಭದ್ರಾವತಿಯಲ್ಲಿ ಬಿಜೆಪಿ ಬಾವುಟ ಹಾರುವುದು ಅನುಮಾನ. ಬಿ. ಕೆ. ಸಂಗಮೇಶ್ವರ ಆರೋಗ್ಯದ ಕಾರಣ ಚುನಾವಣೆಯಿಂದ ದೂರ ಉಳಿದರೂ ಸಹೋದರ ಕೌನ್ಸಿಲರ್ ಮೋಹನ್ ಅಥವ ಪುತ್ರ ಗಣೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಬಹುದು. ಸಿ. ಎಂ. ಇಬ್ರಾಹಿಂ ಸ್ಥಳೀಯ ಮುಸ್ಲಿಮರ ಮೇಲೆ ಪ್ರಭಾವ ಬೀರಿ ಶಾರಾದಾ ಅಪ್ಪಾಜಿ ಗೌಡ ಗೆಲ್ಲಿಸುತ್ತಾರಾ? ಎಂದು ಕಾದು ನೋಡಬೇಕಿದೆ. ಒಟ್ಟು ಮತದಾರರು 213223. ಪುರುಷರು 103878, ಮಹಿಳೆಯರು 109345.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+