ಶಿವಮೊಗ್ಗದ ಮಾರವಳ್ಳಿಯಲ್ಲಿ ಕದಂಬರ ಕಾಲದ ನರಸಿಂಹ ಶಿಲ್ಪ ಪತ್ತೆ
ಶಿವಮೊಗ್ಗ, ಜೂನ್ 20: ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮಾರವಳ್ಳಿ ಗ್ರಾಮದ ಬೆಟ್ಟದ ಮೇಲೆ ಹುಲಿಸಿದ್ದೇಶ್ವರ ದೇವರು ಎಂದು ಸ್ಥಳೀಯರು ಕರೆಯುವ ನರಸಿಂಹ ಶಿಲ್ಪವು ಪತ್ತೆಯಾಗಿದೆ. ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ ಅವರು ಕ್ಷೇತ್ರಕಾರ್ಯ ಕೈಗೊಂಡ ಸಂದರ್ಭ ಈ ಶಿಲ್ಪ ಪತ್ತೆಯಾಗಿದೆ.
ಸುಮಾರು ಎರಡು ಅಡಿ ಎತ್ತರ, ಒಂದು ಅಡಿ ಅಗಲ ಹಾಗೂ ನಾಲ್ಕು ಅಡಿ ಸುತ್ತಳತೆಯನ್ನು ಈ ಶಿಲ್ಪ ಹೊಂದಿದೆ. ಮುಂಗಾಲು ಹಾಗೂ ಹಿಂಗಾಲನ್ನು ಊರಿ ಕುಳಿತಿರುವಂತಿರುವ ಈ ಶಿಲ್ಪಕ್ಕೆ ಎರಡೆರಡು ಕೊರೆ ಹಲ್ಲುಗಳ ಕೆತ್ತನೆಯಿದೆ. ಶಿಲ್ಪವು ಮೀಸೆ ಹೊಂದಿದ್ದು, ಕಣ್ಣು ಹಾಗೂ ಮೂಗು ಉಬ್ಬಿದಂತಿವೆ. ಈ ಶಿಲ್ಪಕ್ಕೆ ಈಚೆಗೆ ಕಾಡುಗಲ್ಲುಗಳಿಂದ ಚಿಕ್ಕ ದೇವಾಲಯ ನಿರ್ಮಾಣ ಮಾಡಲಾಗಿದೆ.
ಆರಂಭವಾಗಿದೆ ಐತಿಹಾಸಿಕ ಮಡಿಕೇರಿ ಕೋಟೆಗೆ ಕಾಯಕಲ್ಪ ನೀಡುವ ಕೆಲಸ
ಈ ಶಿಲ್ಪವು ಕ್ರಿ.ಶ. 3 ಮತ್ತು 4ನೇ ಶತಮಾನದ ಕದಂಬರ ಕಾಲದ ಶಿಲ್ಪ ಎಂದು ಅಂದಾಜಿಸಲಾಗಿದೆ. ಮಳವಳ್ಳಿಯ ಶಿವಸ್ಕಂದ ವರ್ಮನ ಶಾಸನದಲ್ಲಿ ನರಸಿಂಹ ಶಿಲ್ಪ ದೊರೆತಿರುವ ಸ್ಥಳದಿಂದ ಎರಡು ಕಿ.ಮೀ ಅಂತರದಲ್ಲಿ ಇರುವ ಮತ್ತಿ ಕೋಟೆಯನ್ನು ಮರಿಯಾಸ ಎಂದು ಕರೆಯಲಾಗಿದೆ ಎಂಬ ಮಾಹಿತಿ ಇದೆ.
ಈಗ ಇದನ್ನು ಮತ್ತಿಕಟ್ಟೆ ಎಂದು ಕರೆಯಲಾಗಿದ್ದು, ಈ ಶಿಲ್ಪವು ಅದರ ಸಮೀಪವೇ ದೊರೆತಿರುವುದರಿಂದ ಈ ಸ್ಥಳವು ಕದಂಬರ ಕಾಲದ್ದೆಂದು ಅಂದಾಜಿಸಲಾಗಿದೆ. ಈ ಬೆಟ್ಟವು ಅರಣ್ಯ ಪ್ರದೇಶವಾಗಿದ್ದರಿಂದ, ಜೊತೆಗೆ ಪಶ್ಚಿಮ ಘಟ್ಟದಲ್ಲಿ ಹುಲಿಗಳು ಹೆಚ್ಚಾಗಿರುವುದರಿಂದ ಹುಲಿ ಮುಖದ ನರಸಿಂಹ ಶಿಲ್ಪಗಳ ಆರಾಧನೆ ಇರಬಹುದು, ಇದು ಪ್ರಕೃತಿ ದೇವತೆಯ ಸಂರಕ್ಷಣೆ ಹಾಗೂ ಗೋವು -ಮಾನವರ ಸಂರಕ್ಷಣೆಯ ಸಂಕೇತವೆನ್ನಬಹುದು ಎನ್ನುವುದು ಶೇಜೇಶ್ವರ ಅವರ ಅಭಿಪ್ರಾಯ.