ಮೊದಲ ದಿನ ಜೋಗದ ಸೌಂದರ್ಯ ಕಣ್ತುಂಬಿಕೊಂಡ ಜನ
ಶಿವಮೊಗ್ಗ, ಜೂನ್ 28; ಕೋವಿಡ್ ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ ಜೋಗ ಜಲಪಾತಕ್ಕೆ ಇವತ್ತಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನ ನೂರಾರು ಪ್ರವಾಸಿರು ಜಲಪಾತದ ರಮಣೀಯತೆಯನ್ನು ಕಣ್ತುಂಬಿಕೊಂಡರು.
ಕಳೆದ ಎರಡು ತಿಂಗಳಿಂದ ಜೋಗ ಜಲಪಾತ ವೀಕ್ಷಣೆಯನ್ನು ಬಂದ್ ಮಾಡಲಾಗಿತ್ತು. ಜಲಪಾತದ ವ್ಯೂ ಪಾಯಿಂಟ್ ಕಡೆಯ ಗೇಟ್‌ಗೆ ಬೀಗ ಹಾಕಲಾಗಿತ್ತು. ಸರ್ಕಾರ ಪ್ರವಾಸಿ ತಾಣಗಳಿಗೆ ಅವಕಾಶ ನೀಡಿದ ಬೆನ್ನಿಗೆ ಜೋಗ ಜಲಪಾತದ ವೀಕ್ಷಣೆಗೂ ಅವಕಾಶ ನೀಡಲಾಗಿದೆ.
ಮಳೆಗಾಲ ಆದ್ದರಿಂದ ಜೋಗದ ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳು ಮೈದುಂಬಿಕೊಂಡಿವೆ. ನೀರು ಧುಮ್ಮಿಕ್ಕುವ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಇವತ್ತು ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿದ್ದರು. ಆರಂಭದಲ್ಲೇ ಸುಮಾರು 991 ಪ್ರವಾಸಿಗರು ಜೋಗ ವೀಕ್ಷಿಸಿ, ಕಣ್ತುಂಬಿಕೊಂಡರು.

ಕೋವಿಡ್ ನಿಯಮ; ಜೋಗ ಜಲಪಾತ ಕಣ್ತುಂಬಿಕೊಳ್ಳಲು ಮಳೆಗಾಲದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ಈಗ ಕೋವಿಡ್ ಇರುವುದರಿಂದ ಸರ್ಕಾರ ವಿಧಿಸಿರುವ ಕೆಲವು ಕಠಿಣ ನಿಯಮಗಳನ್ನು ಪಾಲಿಸಬೇಕಿದೆ. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಆಗಾಗ ಸೂಚನೆಯನ್ನು ನೀಡಲಾಗುತ್ತಿದೆ.
ಪ್ರತಿ ದಿನ ಜೋಗದಲ್ಲಿ ಜಲಪಾತ ವೀಕ್ಷಣೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು ಆಗಮಿಸುತ್ತಿರುವುದರಿಂದ ಜೋಗದಲ್ಲಿ ಮತ್ತೆ ಚಟುವಟಿಕೆಗೆ ಗರಿಗೆದರಿದೆ. ಫೋಟೊಗ್ರಾಫರ್‌ಗಳಿಗೆ, ಸುತ್ತಮುತ್ತಲ ಅಂಗಡಿಗಳಲ್ಲಿ ವ್ಯಾಪಾರ ಪುನಾರಂಭವಾಗಿದೆ.












Click it and Unblock the Notifications