ಶಿಕಾರಿಪುರ 'ಶಿಕಾರಿ'ಗೆ ಒಂದಾದ ಕೈ-ತೆನೆ

ಶಿವಮೊಗ್ಗ. ಆ. 14 : ಮಾಜಿ ಸಿಎಂ, ಸಂಸದ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ ತವರಿನಲ್ಲೇ ಸೋಲಿನ ರುಚಿ ತೋರಿಸಬೇಕೆಂದು ಅವರ ಎದುರಾಳಿಗಳು ಪಣತೊಟ್ಟಿದ್ದಾರೆ. ಗುರುವಾರ ಜೆಡಿಎಸ್‌ ಮತ್ತು ಕಾಂಗ್ರೆಸ್ ನಾಯಕರು ಶಿಕಾರಿಪುರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಜೆಡಿಎಸ್‌ ಬೇಷರತ್‌ಆಗಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಎಸ್‌.ಶಾಂತವೀರಪ್ಪಗೌಡ ಅವರಿಗೆ ಬೆಂಬಲ ಸೂಚಿಸುವ ಮೂಲಕ ಚುನಾವಣೆ ರಂಗೇರುವಂತೆ ಮಾಡಿದೆ. ಇಷ್ಟು ದಿನ ಕಚ್ಚಾಡಿಕೊಳ್ಳುತ್ತಿದ್ದ ನಾಯಕರು ಒಟ್ಟಾಗಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದು ಗುರುವಾರದ ವಿಶೇಷ.

press meet

ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಸಿ.ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌, ಅಭ್ಯರ್ಥಿ ಶಾಂತವೀರಪ್ಪ ಗೌಡ, ಕಾಂಗ್ರೆಸ್‌ ಮುಖಂಡರಾದ ಮಂಜುನಾಥ ಭಂಡಾರಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಪ್ರಸನ್ನಕುಮಾರ್‌, ಶಾಸಕ ಮಧು ಬಂಗಾರಪ್ಪ, ಜೆಡಿಎಸ್‌ ಮುಖಂಡ ಎಚ್‌.ಟಿ.ಬಳಗಾರ್‌ ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಶಿವಮೊಗ್ಗ ಜಿಲ್ಲೆಯಲ್ಲಿ ಬೇರೂರಿರುವ ಕೋಮವಾದಿ ಶಕ್ತಿಗಳನ್ನು ಹೊಡೆದೋಡಿಸಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅನಿವಾರ್ಯವಾಗಿದೆ. ಸಮಾಜವಾದಿ ನೆಲೆಗಟ್ಟಿನ ಜಿಲ್ಲೆಗೆ ಹಿಡಿದಿರುವ ಗ್ರಹಣ ಬಿಡಿಸಲು ನಾವೆಲ್ಲರೂ ಒಗ್ಗೂಡಿದ್ದೇವೆ ಎಂದು ಹೇಳಿದರು.

ಶಾಸಕ ಮಧು ಬಂಗಾರಪ್ಪ ಮಾತನಾಡಿ, ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ ಕಾರ್ಯಕರ್ತರು ಅತಂತ್ರರಾಗುವುದು ಬೇಡ. ಪಕ್ಷದ ಹಿರಿಯ ನಾಯಕರ ಆಣತಿಯಂತೆ ಉಪಚುನಾವಣೆಗೆ ಸೀಮಿತವಾಗಿ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.

ಜೆಡಿಎಸ್‌ ಮುಖಂಡ ಎಚ್‌.ಟಿ.ಬಳಿಗಾರ್‌ ಮಾತನಾಡಿ, ಎಸ್‌.ಬಂಗಾರಪ್ಪ ಅವರು ವಿಧಾನಸಭೆ ಮತ್ತು ಲೋಕಸಭೆಗೆ ಸ್ಪರ್ಧಿಸಿದ್ದಾಗ ಬಿಜೆಪಿ ವಿರುದ್ಧ ಸೋಲು ಅನುಭವಿಸಿದ್ದರು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಮತ್ತು ಜಾತ್ಯತೀತ ಶಕ್ತಿಗಳ ಪ್ರದರ್ಶನಕ್ಕೆ ಈ ಉಪಚುನಾವಣೆ ವೇದಿಕೆಯಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕಾರಿಪುರದಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಕೈಗೊಂಡಿದ್ದಾಗ ಜೆಡಿಎಸ್‌ ಮುಖಂಡ ಎಚ್‌.ಟಿ.ಬಳಿಗಾರ್‌ ಮನೆಗೆ ಭೇಟಿ ನೀಡಿದ್ದರು. ಆ ವೇಳೆಯೇ ಬೆಂಬಲದ ಕುರಿತು ಮಾತುಕತೆ ನಡೆದಿತ್ತು.(ಶಿಕಾರಿಪುರದಲ್ಲಿ ಕಾಂಗ್ರೆಸ್‌ ಕೈ ಹಿಡಿದ ಜೆಡಿಎಸ್‌)

ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೂಳಿಹಟ್ಟಿ ಶೇಖರ್‌ ಕೂಡಾ ಶಿಕಾರಿಪುರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಆಗಸ್ಟ್‌ 21ರಂದು ಮತದಾನ ನಡೆಯಲಿದ್ದು ಆಗಸ್ಟ್‌ 25ರಂದು ಯಾರಿಗೆ ಗೆಲುವು ಎಂಬುದು ತಿಳಿಯಲಿದೆ.

ಎಲ್ಲೆಲ್ಲಿ ಚುನಾವಣೆ: ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ಆಗಸ್ಟ್‌ 21 ರಂದು ಉಪಚುನಾವಣೆ ನಡೆಯಲಿದೆ. ಚಿಕ್ಕೋಡಿ, ಶಿಕಾರಿಪುರ ಮತ್ತು ಬಳ್ಳಾರಿ ಮೀಸಲು ಕ್ಷೇತ್ರಕ್ಕೆ ಹೊಸ ಜನಪ್ರತಿನಿಧಿಗಳ ಆಯ್ಕೆಯಾಗಬೇಕಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಪ್ರಕಾಶ್‌ ಹುಕ್ಕೇರಿ, ಬಿ.ಎಸ್‌.ಯಡಿಯೂರಪ್ಪ ಮತ್ತು ಬಿ.ಶ್ರೀರಾಮಲು ಸಂಸದರಾಗಿ ಆಯ್ಕೆಯಾದ್ದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಈ 3 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+