ಶಿವಮೊಗ್ಗ: ಶಂಕಿತ ಉಗ್ರರ ತೀವ್ರ ವಿಚಾರಣೆ: ಗುಪ್ತಚರ ಇಲಾಖೆ ಅಧಿಕಾರಿಗಳು ದೌಡು
ಶಿವಮೊಗ್ಗ, ಸೆಪ್ಟೆಂಬರ್, 23: ಐಸಿಸ್ ಜೊತೆ ನಂಟು ಹೊಂದಿರುವ ಶಂಕಿತ ಉಗ್ರರ ವಿಚಾರಣೆ ಬಿರುಸುಗೊಂಡಿದೆ. ರಾಜ್ಯ, ರಾಷ್ಟ್ರೀಯ ಮಟ್ಟದ ತನಿಖಾ ಸಂಸ್ಥೆಗಳು ಶಿವಮೊಗ್ಗದತ್ತ ಕಣ್ಣಿಟ್ಟಿವೆ. ಸರದಿಯಲ್ಲಿ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಶಿವಮೊಗ್ಗದ ಸಯ್ಯದ್ ಯಾಸೀನ್ (21) ಮತ್ತು ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ (22) ಬಂಧಿತ ಶಂಕಿತ ಉಗ್ರರಾಗಿದ್ದು, ಇವರ ವಿಚಾರಣೆ ತೀವ್ರಗೊಂಡಿದೆ. ತನಿಖಾ ಸಂಸ್ಥೆಗಳು ಶಂಕಿತ ಉಗ್ರರ ಬಳಿ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿವೆ.
ಶಂಕಿತ ಉಗ್ರರನ್ನು ಶಿವಮೊಗ್ಗದ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಶಿವಮೊಗ್ಗ ಪೊಲೀಸರು ಶಂಕಿತರಿಂದ ಹೇಳಿಕೆ ಪಡೆದಿದ್ದು, ಶಿವಮೊಗ್ಗ, ಮಂಗಳೂರು ಸೇರಿ 11 ಕಡೆ ಮಹಜರ್ ನಡೆಸಿದ್ದಾರೆ. ಲಭ್ಯವಾದ ಸಾಕ್ಷ್ಯಾಧಾರಗಳ ಮೇಲೆ ವಿಚಾರಣೆ ಮತ್ತಷ್ಟು ತೀವ್ರಗೊಂಡಿದೆ. ಕೇಂದ್ರ ಮತ್ತು ರಾಜ್ಯದ ಗುಪ್ತಚರ ಇಲಾಖೆ ಅಧಿಕಾರಿಗಳು ಯಾಸೀನ್ ಮತ್ತು ಮಾಜ್‌ನ ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರಿಗೂ ಅಧಿಕಾರಿಗಳು ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ಸ್ಫೋಟಕಗಳು, ಹಣಕಾಸು ನೆರವು, ಯಾರೆಲ್ಲ ಭಾಗಿ ಆಗಿದ್ದರು, ಯೋಜನಗಳು ಏನು ಎಂಬುದರ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.

ಠಾಣೆಯೊಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಶಂಕಿತ ಉಗ್ರರ ವಿಚಾರಣೆ ಹಿನ್ನೆಲೆ ಶಿವಮೊಗ್ಗ ಗ್ರಾಮಾಂತರ ಠಾಣೆಯೊಳಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ದೂರು ನೀಡಲು ಬರುವವರು, ವಿವಿಧ ಪ್ರಕರಣಗಳ ಕುರಿತು ಮಾಹಿತಿ ಕೇಳಿಕೊಂಡು ಬರುವವರನ್ನು ಠಾಣೆಯ ಹೊರಗೆ ನಿಲ್ಲಿಸಿ, ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ದೂರುದಾರರಿಂದ ದೂರುಗಳನ್ನು ಸ್ವೀಕರಿಸಿ ಕಳುಹಿಸುತ್ತಿದ್ದಾರೆ. ಓರ್ವ ಪಿಎಸ್ಐ ಮತ್ತು ಸಿಬ್ಬಂದಿ ಠಾಣೆಯ ಹೊರಗಡೆ ನಿಂತುಕೊಂಡು ಅಲ್ಲಿಯೇ ಜನರನ್ನು ಮಾತನಾಡಿಸಿ ಹಿಂದಕ್ಕೆ ಕಳುಹಿಸುತ್ತಿದ್ದಾರೆ.

ಶಂಕಿತ ಉಗ್ರರ ಮೊಬೈಲ್‌ಗಳು ವಶಕ್ಕೆ
ಶಂಕಿತರು ಬಳಸುತ್ತಿದ್ದ ಮೊಬೈಲ್ ಫೋನ್‌ಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಶಂಕಿತ ಉಗ್ರರ ಫೋನ್‌ಗಳಲ್ಲಿ ಇರುವ ಮಾಹಿತಿ ಸಂಗ್ರಹ ಕಾರ್ಯವನ್ನು ಆರಂಭಿಸಿದ್ದಾರೆ. ಸೈಬರ್ ಅಪರಾಧ ಠಾಣೆ ಪೊಲೀಸರ ನೆರವಿನೊಂದಿಗೆ ಅತ್ಯಾಧುನಿಕ ಕಂಪ್ಯೂಟರ್ ಮತ್ತು ಉಪಕರಣ ಬಳಕೆ ಮಾಡಿಕೊಂಡು ಮೊಬೈಲ್ ಡಾಟಾ ರಿಕವರಿ ಮಾಡಲಾಗುತ್ತಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.












Click it and Unblock the Notifications