ಅಡಿಕೆ ಬೆಳೆಗಾರನ ಮನ ಗೆದ್ದರೆ ಎಂಎಲ್ಎ ಆಗುವುದು ಖಚಿತ, ಯಾಕೆ? ಇಲ್ಲಿದೆ 4 ಕಾರಣ..!
ಶಿವಮೊಗ್ಗ, ನವೆಂಬರ್ 27: ಜಿಲ್ಲೆಯ ರೈತರಿಗೆ ಅರ್ಥಿಕವಾಗಿ ಬಲ ನೀಡಿದ್ದ ಅಡಿಕೆ ಈ ಬಾರಿ ಚುನಾವಣೆಯ ಪ್ರಮುಖ ವಿಷಯವಾಗಿದೆ. ಅಡಿಕೆ ಮತ್ತು ಅಡಿಕೆ ಬೆಳೆಗಾರರ ಪರವಾಗಿ ನಿಲ್ಲುವವರಿಗೆ ಹೆಚ್ಚಿನ ಮತ ಲಭಿಸಲಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ವಿಚಾರ.
ಇದೆ ಕಾರಣಕ್ಕೆ ಜಿಲ್ಲೆಯಲ್ಲಿ ಅಡಿಕೆ ಕೇಂದ್ರಿತ ರಾಜಕಾರಣ ಆರಂಭವಾಗಿದೆ. 2023ರ ವಿಧಾಸಭೆ ಚುನಾವಣೆಯಲ್ಲಿ ಅಡಿಕೆ ಪ್ರಮುಖ ವಿಷಯವಾಗಲಿದೆ. ಅದಕ್ಕೆ ಐದು ಕಾರಣವಿದೆ.
ಎಲೆ ಚುಕ್ಕೆ ರೋಗ ಹಾಗೂ ಬೆಲೆ ಏರಿಳಿತದಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಕಾರ್ಯ ನಿರ್ವಹಿಸಲಿರುವ ಯಾವುದೇ ಪಕ್ಷದ ಅಭ್ಯರ್ಥಿ ಮುಂದಿನ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ.

ಅಡಿಕೆ ಬೆಳಗಾರರ ಭವಿಷ್ಯವನ್ನು ಕರಾಳವಾಗಿಸಿದ ಎಲೆ ಚುಕ್ಕೆ ರೋಗ
ಎಲೆ ಚುಕ್ಕೆ ರೋಗ ಅಡಿಕೆ ಬೆಳಗಾರರ ಭವಿಷ್ಯವನ್ನು ಕರಾಳವಾಗಿಸಿದೆ. ಇಳುವರಿ ಕುಸಿದು ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಕೊರೊನಾಗಿಂತಲೂ ವೇಗವಾಗಿ ರೋಗ ಹರಡುತ್ತಿದ್ದು ಔಷಧವೂ ಇಲ್ಲ, ಪರಿಹಾರವೂ ಇಲ್ಲದೆ ರೈತರು ಪರಿತಪಿಸುವಂತಾಗಿದೆ. ಹಾಗಾಗಿ ಈ ಬಾರಿ ಅಡಿಕೆ ಎಲೆ ಚುಕ್ಕೆ ರೋಗ ಪ್ರಮುಖ ರಾಜಕೀಯ ವಿಷಯವಾಗಲಿದೆ.
ರಾಜ್ಯ ಸರ್ಕಾರ ಕೋಟಿ ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಅಲ್ಲದೇ ತಜ್ಞರ ತಂಡವು ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದೆ. ಇದರಿಂದ ರೈತರಿಗಾದ ಪ್ರಯೋಜನವೇನು ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಅಲ್ಲಲ್ಲಿ ಪ್ರತಿಭಟನೆ, ಪಾದಯಾತ್ರೆ, ಹಕ್ಕೊತ್ತಾಯಗಳನ್ನು ನಡೆಸಲಾಗುತ್ತಿದೆ. ಎಲೆ ಚುಕ್ಕೆ ರೋಗ ಮತ್ತು ರಾಜಕೀಯ ಮೇಲಾಟದಲ್ಲಿ ಪರಿಹಾರ ಸಿಗದೆ ಬೆಳಗಾರನ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ.

ಟಾಸ್ಕ್ ಪೋರ್ಸ್ ವಿರುದ್ಧ ವಿಪಕ್ಷಗಳ ಕಿಡಿ
ಅಡಿಕೆ ಬೆಳೆಗಾರರಿಗೆ ಅಭಯ ನೀಡಲು ಸರ್ಕಾರ ಅಡಿಕೆ ಕಾರ್ಯಪಡೆ ರಚಿಸಿದೆ. ಅಡಿಕೆ ಬೆಳೆಗಾರರು, ಮಾರಾಟಗಾರರು, ತಜ್ಞರು ಸೇರಿದಂತೆ ಹಲವರು ಕಾರ್ಯಪಡೆಯಲ್ಲಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಇದರ ಅಧ್ಯಕ್ಷರಾಗಿದ್ದಾರೆ. ಸಭೆಗಳನ್ನು ನಡೆಸಿ ಅಡಿಕೆಯ ಮಾನ, ಬೆಳೆಗಾರರ ಭವಿಷ್ಯ ಕಾಪಾಡುವ ಕುರಿತು ಚರ್ಚಿಸಲಾಯಿತು. ಅಡಿಕೆಯ ಉಪ ಉತ್ಪನ್ನಗಳ ಸಂಶೋಧನೆ, ಉತ್ಪಾದನೆಗೆ ಒತ್ತು ನೀಡಲು ಚಿಂತಿಸಲಾಯಿತು.
ಈ ಮಧ್ಯೆ ವಿರೋಧ ಪಕ್ಷಗಳು ಟಾಸ್ಕ್ ಪೋರ್ಸ್ ವಿರುದ್ಧವು ಆಕ್ರೋಶ ಹೊರ ಹಾಕಿವೆ. ಕಾರ್ಯಪಡೆಯಿಂದ ಆಗಿರುವ ಪ್ರಯೋಜನವೇನು?. ಅಡಿಕೆ ಬೆಳೆಗಾರರಿಗೆ ಕಾರ್ಯಪಡೆ ಬಲ ತುಂಬಲು ವಿಫಲವಾಗಿದೆ ಎಂದು ಆರೋಪಿಸಿವೆ. ಕಾರ್ಯಪಡೆ ಸ್ಥಾಪಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದ ಬೆಳೆಗಾರರು, ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ಸಿಗದೆ ಪರಿತಪಿಸುತ್ತಿದ್ದಾರೆ.

ಎಲೆ ಚುಕ್ಕೆಗೆ ಪರಿಹಾರ ಒದಗಿಸಲು ಸಂಶೋಧನ ಕೇಂದ್ರಕ್ಕೆ ಬೇಡಿಕೆ
ಅಡಿಕೆ ಬೆಳೆದರೆ ಹಣವಷ್ಟೇ ಬರುವುದಿಲ್ಲ. ಸಾಲು ಸಾಲು ಸಮಸ್ಯೆಗಳು ಬೆನ್ನು ಹತ್ತುತ್ತವೆ. ಅಡಿಕೆಗೆ ಒಂದಿಲ್ಲೊಂದು ಸಮಸ್ಯೆ ಇದ್ದಿದ್ದೆ. ಕೊಳೆ ರೋಗದಿಂದ ಎಲೆ ಚುಕ್ಕೆ ರೋಗದವರೆಗೆ ವರ್ಷದಿಂದ ವರ್ಷಕ್ಕೆ ಹೊಸ ಮಾದರಿಯ ಸಮಸ್ಯೆ ಎದುರಾಗುತ್ತದೆ. ಇವುಗಳಿಗೆ ಥಟ್ ಅಂತಾ ಪರಿಹಾರ ಒದಗಿಸಲು ಸಂಶೋಧನ ಕೇಂದ್ರ ಬೇಕು ಎಂಬ ಬೇಡಿಕೆ ಇತ್ತು. ಕಳೆದ ಚುನಾವಣೆ ಹೊತ್ತಿಗೆ ತೀರ್ಥಹಳ್ಳಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಡಿಕೆ ಸಂಶೋಧನ ಕೇಂದ್ರ ಸ್ಥಾಪನೆಯ ಭರವಸೆ ನೀಡಿದ್ದರು. ಇದು ಮಲೆನಾಡ ಅಡಿಕೆ ಬೆಳೆಗಾರರಿಗೆ ತುಸು ನೆಮ್ಮದಿ ಮೂಡಿಸಿತ್ತು.
ಅಡಿಕೆ ಸಂಶೋಧನ ಕೇಂದ್ರವು ಉಳಿದ ಭರವಸೆಗಳಂತೆ ಕನಸಾಗಿಯೆ ಉಳಿದಿದೆ. ಈ ಬಾರಿ ಚುನಾವಣೆಯಲ್ಲಿ ಇದು ಕೂಡ ರಾಜಕಾರಣಿಗಳ ಮತ ಗಳಿಕೆಯ ಪ್ರಮುಖ ವಿಷಯ ವಸ್ತುವಾಗಿದೆ. ಸಂಶೋಧನೆ ಕೇಂದ್ರ ಸ್ಥಾಪಿಸಿಯೇ ಸಿದ್ಧ ಎಂದು ಬಿಜೆಪಿ ಮುಖಂಡರು ವಾದಿಸುತ್ತಿದ್ದಾರೆ. ಈವರೆಗೂ ಸ್ಥಾಪನೆಯಾಗದಿರಲು ಕಾರಣವೇನು..? ಸಂಶೋಧನಾ ಕೇಂದ್ರ ರೂಪುರೇಷ ಏನು ಎಂದು ವಿರೋಧ ಪಕ್ಷದವರು ಪ್ರಶ್ನಿಸುತ್ತಿದ್ದಾರೆ.

ಕೋರ್ಟ್ ಅಂಗಳದಲ್ಲಿ ಅಡಿಕೆಯ ಮಾನ
‘ಅಡಿಕೆಯಿಂದ ಕ್ಯಾನ್ಸರ್ ಬರಲಿದೆ', ‘ಆರೊಗ್ಯಕ್ಕೆ ಹಾನಿಕಾರಕ' ಎಂದು ಪದೇ ಪದೇ ಸುದ್ದಿಯಾಗುತ್ತಿತ್ತು. ಇದು ಅಡಿಕೆ ಬೆಲೆ ಪಾತಾಳಕ್ಕೆ ಕುಸಿಯುಂತೆ ಮಾಡುತ್ತಿತ್ತು. ಅಡಿಕೆ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣವಿದೆ. ಕಳೆದೊಂದು ದಶಕದಿಂದ ವಿಚಾರಣೆ ನಡೆಯುತ್ತಿದ್ದು, ಸಂಶೋಧನೆಗಳು ಆಗುತ್ತಿವೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಇದು ಕೂಡ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಮತ ಬ್ಯಾಂಕ್ ಭದ್ರಗೊಳಿಸಲು ಇದು ಪ್ರಮುಖ ವಿಷಯವಾಗಿದೆ.
ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜಿಲ್ಲೆಯ ಲಕ್ಷಾಂತರ ಜನರ ಭವಿಷ್ಯ ಅಡಿಕೆ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಅಡಿಕೆ ಪ್ರಮುಖ ಚುನಾವಣಾ ವಿಷಯವಾಗಿದ್ದು, ಪ್ರಣಾಳಿಕೆಗಳಲ್ಲಿ ಜಾಗ ಪಡೆಯುವ ಸಾಧ್ಯತೆ ಇದೆ. ಆದರೆ ಗೊಂದಲದಲ್ಲಿ ಇರುವ ಅಡಿಕೆ ಬೆಳೆಗಾರನ ಮನಸನ್ನು ಗೆಲ್ಲುವವರಾರು ಎನ್ನುವುದು ಕುತೂಹಲ ಮೂಡಿಸಿದೆ.












Click it and Unblock the Notifications