ಅತಂತ್ರ ಫಲಿತಾಂಶ ಬಂದರೆ ಯಡಿಯೂರಪ್ಪ ಬಿಹಾರ್ ಗೆ
ಶಿವಮೊಗ್ಗ, ನ 7: ಒಂದು ವೇಳೆ ಬಿಹಾರ್ ನಲ್ಲಿ ಅತಂತ್ರ ಫಲಿತಾಂಶ ಬಂದಿದ್ದೇ ಆದಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಬಿಹಾರ್ ಗೆ ಹೋಗಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.
"ಬಿಹಾರದಲ್ಲಿ ಮಹಾಮೈತ್ರಿ ಒಕ್ಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ. ತೇಜಸ್ವಿ ಯಾದವ್ ಅಲ್ಲಿನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ನಿತೀಶ್ ಕುಮಾರ್ ಅವರ ಆಡಳಿತಕ್ಕೆ ಮತದಾರ ತಿಲಾಂಜಲಿ ಇಡಲಿದ್ದಾನೆ"ಎಂದು ಹರಿಪ್ರಸಾದ್ ಭವಿಷ್ಯ ನುಡಿದಿದ್ದಾರೆ.
"ಹಾಗಾಗದೇ ಅತಂತ್ರ ಫಲಿತಾಂಶ ಬಿಹಾರ್ ನಲ್ಲಿ ಬಂದರೆ, ಯಡಿಯೂರಪ್ಪನವರು ಪಾಟ್ನಾಗೆ ಹೋಗಲಿದ್ದಾರೆ. ಯಾಕೆಂದರೆ, ಅವರು ಆಪರೇಷನ್ ಕಮಲ ಮಾಡುವುದರಲ್ಲಿ ನಿಸ್ಸೀಮರಲ್ಲವೇ"ಎಂದು ಹರಿಪ್ರಸಾದ್, ಬಿಎಸ್ವೈ ಕಾಲೆಳೆದಿದ್ದಾರೆ.

"ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಏನಾಗುತ್ತದೆ ಎಂದು ಈಗಲೇ ಹೇಳಲು ನಾನೇನು ಜ್ಯೋತಿಷಿಯಲ್ಲ. ನಾವು ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನಮಗಿದೆ"ಎಂದು ಹರಿಪ್ರಸಾದ್ ಹೇಳಿದ್ದಾರೆ.
"ರಾಜ್ಯದ ಖಜಾನೆಯನ್ನು ಶಿರಾ ಮತ್ತು ಆರ್.ಆರ್.ನಗರಕ್ಕೆ ತೆಗೆದುಕೊಂಡು ಚುನಾವಣೆಯಲ್ಲಿ ಖರ್ಚು ಮಾಡಿದ್ದಾರೆ. ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ಇಂತಹ ಕೆಟ್ಟ ಚುನಾವಣೆಯನ್ನು ನೋಡಿಲ್ಲ"ಎಂದು ಹರಿಪ್ರಸಾದ್ ವ್ಯಕ್ತ ಪಡಿಸಿದ್ದಾರೆ.
ನವೆಂಬರ್ ಮೂರರಂದು ಶಿರಾ ಮತ್ತು ರಾಜರಾಜೇಶ್ವರಿ ನಗರದ ಅಸೆಂಬ್ಲಿ ಉಪಚುನಾವಣೆ ನಡೆದಿದ್ದು, ಮುಂಬರುವ ಮಂಗಳವಾರ (ನ 10) ಫಲಿತಾಂಶ ಪ್ರಕಟವಾಗಲಿದೆ. ಎರಡೂ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ.












Click it and Unblock the Notifications