Ayanur Manjunath: ಬಿಜೆಪಿಗೆ ರಾಜೀನಾಮೆ ನೀಡುವೆ; ಆಯನೂರು ಮಂಜುನಾಥ್ ಘೋಷಣೆ
ಶಿವಮೊಗ್ಗ, ಏಪ್ರಿಲ್ 19; ಕರ್ನಾಟಕ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ ಮುಂದುವರೆದಿದೆ. ಮೇ 10ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಗುರುವಾರ ಕೊನೆಯ ದಿನವಾಗಿದೆ. ಶಿವಮೊಗ್ಗದ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿದರು.
ಗುರುವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಆಯನೂರು ಮಂಜುನಾಥ್ ಅವರು, "ನಾನು ಸಭಾಪತಿಗಳನ್ನು ಭೇಟಿ ಮಾಡಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ" ಎಂದು ಹೇಳಿದರು.

ಆಯನೂರು ಮಂಜುನಾಥ್ ಈ ಬಾರಿಯ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಆದರೆ ಇಲ್ಲಿಯ ತನಕ ಬಿಜೆಪಿ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿದೆ. ಟಿಕೆಟ್ ಕೈತಪ್ಪುವ ಸೂಚನೆ ಸಿಕ್ಕಿದ್ದು, ಅವರು ಬಿಜೆಪಿ ತೊರೆಯುತ್ತಿದ್ದಾರೆ.
ಈಶ್ವರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ;
ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ವಿರುದ್ಧ ಆಯನೂರು ಮಂಜುನಾಥ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. "ಮನಬಂದಂತೆ ಮಾತನಾಡುವವರ ಬಾಯಿಗೆ ಹೊಲಿಗೆ ಬೀಳಬೇಕಿದೆ. ಕೆಲವರ ನಾಲಿಗೆ ಈಗಾಗಲೇ ನಿಯಂತ್ರಣಕ್ಕೆ ಬಂದಿದೆ. ಶಿವಮೊಗ್ಗದ ಘನತೆ, ಗೌರವಕ್ಕೆ ಧಕ್ಕೆ ಬಂದಿದೆ. ನನ್ನ ನಿಲುವನ್ನು ಎಲ್ಲರೂ ಪ್ರಶಂಸೆ ಮಾಡಿದ್ದಾರೆ" ಎಂದರು.
"ನಾನು ಟಿಕೆಟ್‌ಗಾಗಿ ಪಕ್ಷವನ್ನು ಬಿಡುತ್ತಿಲ್ಲ. ಶಿವಮೊಗ್ಗ ನಗರದ ಜನರ ಋಣ ತೀರಿಸಲು ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಕೊಡುವ ಲೆಕ್ಕ ತುಂಬಾ ಇದೆ. ಈ ಚುನಾವಣೆಯಲ್ಲಿ ಕೊಡುತ್ತೇನೆ. ಯಡಿಯೂರಪ್ಪ ಪರ ಧ್ವನಿ ಎತ್ತಿನ ಏಕೈಕ ನಾಯಕ ನಾನು. ಅವರ ಮೇಲೆ ಆರೋಪ ಬಂದಾಗ ನಾನು ಒಬ್ಬನೇ ಅವರ ಪರವಾಗಿ ಉತ್ತರ ನೀಡಿದ್ದೆ" ಎಂದು ಆಯನೂರು ಮಂಜುನಾಥ್ ಹೇಳಿದರು.
"ಇಂದು ಹುಬ್ಬಳ್ಳಿಗೆ ಭೇಟಿ ನೀಡಿ ಸಭಾಪತಿಗಳನ್ನು ಭೇಟಿ ಮಾಡಿ ರಾಜೀನಾಮೆ ನೀಡುತ್ತೇನೆ. ವಿಧಾನಸಭೆ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಆದರೆ ಯಾವ ಪಕ್ಷದಿಂದ ಎಂದು ಮಧ್ಯಾಹ್ನ ಹೇಳುತ್ತೇನೆ" ಎಂದು ಆಯನೂರು ಮಂಜುನಾಥ್ ಸ್ಪಷ್ಟಪಡಿಸಿದರು.
ಅಭ್ಯರ್ಥಿ ಘೋಷಣೆ ಆಗಿಲ್ಲ; ಶಿವಮೊಗ್ಗ ನಗರ ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಕೆ. ಎಸ್. ಈಶ್ವರಪ್ಪ. ಆದರೆ ಅವರು ಕೆಲವು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾಗೆ ಪತ್ರವನ್ನು ಬರೆದು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಈ ಬಾರಿಯ ಚುನಾವಣೆಗೆ ಯಾವ ಕ್ಷೇತ್ರಕ್ಕೂ ನನ್ನ ಹೆಸರು ಪರಿಗಣಿಸಬಾರದು ಎಂದು ಹೇಳಿದ್ದರು.
ಕೆ. ಎಸ್. ಈಶ್ವರಪ್ಪ ಬದಲು ಈ ಬಾರಿ ಡಾ. ಧನಂಜಯ್ ಸರ್ಜಿ, ಆಯನೂರು ಮಂಜುನಾಥ್, ಈಶ್ವರಪ್ಪ ಪುತ್ರ ಕೆ. ಈ. ಕಾಂತೇಶ್‌ಗೆ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿದ್ದರೂ ಸಹ ಬಿಜೆಪಿ ಶಿವಮೊಗ್ಗ ನಗರಕ್ಕೆ ಅಭ್ಯರ್ಥಿಯನ್ನು ಹೆಸರಿಸಿಲ್ಲ.
ಆಯನೂರು ಮಂಜುನಾಥ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪಲಿದೆ ಎನ್ನುವುದು ಖಚಿತವಾದ ಹಿನ್ನಲೆಯಲ್ಲಿ ಪಕ್ಷ ಬಿಡಲು ಅವರು ತಯಾರಿ ನಡೆಸಿದ್ದಾರೆ. ಆದರೆ ಟಿಕೆಟ್ ಯಾರಿಗೆ ಸಿಗಲಿದೆ? ಎಂಬುದು ಕುತೂಹಲವಾಗಿದೆ. ಅಲ್ಲದೇ ಆಯನೂರು ಮಂಜುನಾಥ್ ಯಾವ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ? ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ.












Click it and Unblock the Notifications