ಟಾಟಾ, ಬಾಯ್ ಬಾಯ್ ಇಲ್ಲ: ಶಿವಮೊಗ್ಗ ಬಿಟ್ಟು ಹೋಗಲ್ಲ!
ಶಿವಮೊಗ್ಗ, ಜೂನ್ 10: ಲೋಕಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಕಾಂಗ್ರೆಸ್‌ನ ಗೀತಾ ಶಿವರಾಜ್ ಕುಮಾರ್ ಅವರನ್ನು 2,43,715 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸೋಮವಾರ ಶಿವಮೊಗ್ಗದಲ್ಲಿ ಕಾಂಗ್ರೆಸ್ ಕೃತಜ್ಞತಾ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಗೀತಾ ಶಿವರಾಜ್ ಕುಮಾರ್, ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, "ಕೃತಜ್ಞತಾ ಸಭೆಗೆ ಬಂದಿದ್ದೇನೆ. ಯಾರಾದರೂ ಒಬ್ಬರು ಗೆಲ್ಲಲೇಬೇಕು ಅದು ಆಗಿದೆ. ನಾನು ಅಂದುಕೊಂಡಂತೆ ಆಗಿಲ್ಲ, 5 ಲಕ್ಷ ಮತದಾರರು ಮತ ನೀಡಿದ್ದಾರೆ. ನಾವು ಚುನಾವಣೆಯಲ್ಲಿ ಮಾಡಬೇಕಾದ ಕೆಲಸ ಮಾಡಿದ್ದೇವೆ ಜನರು ಬೆಂಬಲ ನೀಡಿದ್ದಾರೆ" ಎಂದರು.
"ನಾನು ಶಿವಮೊಗ್ಗ ಜನರ ಜೊತೆಯಲ್ಲಿ ಇರುತ್ತೇನೆ. ಶಿವಮೊಗ್ಗ ಬಿಟ್ಟು ಹೋಗುವ ಪ್ರಶ್ನೆ ಇಲ್ಲ. ಶಿವಮೊಗ್ಗದಲ್ಲಿ ಮನೆ ಮಾಡುತ್ತೇನೆ. ಸೋಲಬಾರದಾಗಿತ್ತು, ಸೋತಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತ ತೆಗೆದುಕೊಂಡಿದ್ದೇನೆ. ನನಗಿಂತ ಹೆಚ್ಚು ಕೆಲಸ ಮಹಿಳೆಯರು ಮಾಡಿದ್ದಾರೆ. ನಾನು ಗೆಲ್ಲುವ ವಿಶ್ವಾಸ ಇತ್ತು, ಆದರೆ ಸೋಲಾಗಿದೆ" ಎಂದು ಹೇಳಿದರು.
ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, "ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ದೊಡ್ಡ ಮತಗಳು ಬಂದಿರುವುದು ಇದೇ ಮೊದಲು. ಮತದಾರರೇ ದೇವರು, ಸಹೋದರ ಮಧು ಕೊನೆ ಕ್ಷಣದವರೆಗೂ ಕೆಲಸ ಮಾಡಿದ್ದಾರೆ" ಎಂದರು.
"ಶಿವರಾಜ್ ಕುಮಾರ್ ಕೂಡ ನನ್ನ ಜೊತೆಗಿದ್ದರು. ಚುನಾವಣೆ ಮಾತ್ರ ಅಲ್ಲ, ಯಾವಾಗಲೂ ಅವರು ನನ್ನ ಜೊತೆಗಿರುತ್ತಾರೆ. ಶಿವಮೊಗ್ಗ ಬಿಟ್ಟು ಹೋಗುವ ಪ್ರಶ್ನೆ ಇಲ್ಲ. ಇಲ್ಲೇ ಇರುತ್ತೇನೆ ಶಕ್ತಿಧಾಮ ಮಾದರಿ ಇಲ್ಲೊಂದು ಶುರು ಮಾಡುತ್ತೇವೆ, ಮನೆ ಕೂಡ ಮಾಡುತ್ತೇವೆ" ಎಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದರು.
"ಟಾಟಾ ಬಾಯ್ ಬಾಯ್ ಏನೂ ಇಲ್ಲ. ನಿಮ್ಮೊಂದಿಗೆ ಇರಲಿದ್ದೇನೆ. ಇನ್ನೂ ಸಾಕಷ್ಟು ವಿಚಾರಗಳಿವೆ. ಆದರೆ ಅದನ್ನು ಇನ್ನೊಮ್ಮೆ ಬಹಿರಂಗಪಡಿಸುತ್ತೇನೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ಬೇಜಾರು ಇಲ್ಲ, ನನ್ನ ತಂದೆಯೂ ಸೋತಿದ್ದರು" ಎಂದು ಹೇಳಿದರು.
ಟಾಟಾ ಬಾಯ್ ಬಾಯ್ ಏನಿದು?: ಶಿವಮೊಗ್ಗ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸೊರಬದ ಮಾಜಿ ಶಾಸಕ, ಗೀತಾ ಶಿವರಾಜ್ ಕುಮಾರ್ ಸಹೋದರ ಕುಮಾರ್ ಬಂಗಾರಪ್ಪ ಫೇಸ್ ಬುಕ್ ಪೋಸ್ಟ್ ಒಂದನ್ನು ಹಾಕಿದ್ದರು.
"ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡ ಇವರಿಗೆ ತಕ್ಕ ಶಾಸ್ತಿಯಾಯಿತು. ಈ ಮಹಾಪರಾಧಕ್ಕಾಗಿ ಜಿಲ್ಲೆಯ, ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿಬರಲಿ, ಟಾಟಾ!" ಎಂದು ಹೇಳಿದ್ದರು.
"ಮೇಲಾಗಿ, ಕನ್ನಡದ ಕಣ್ಮಣಿ ಡಾ. ರಾಜಕುಮಾರ್ ರವರ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ ಅವರಿಗಿಲ್ಲದಿದ್ದ ಇಂಗಿತವನ್ನು ಇತ್ತೆಂದು ಪ್ರಚುರಪಡಿಸಿ ಲಾಭ ಮಾಡಿಕೊಳ್ಳಬಯಸಿದ ಇವರಿಗೆ ಮಾಡಿದ್ದುಣ್ಣೋ ಮಹಾರಾಯ ಎಂಬಂತ ಸ್ಥಿತಿಯಾಗಿದೆ" ಎಂದು ಟೀಕಿಸಿದ್ದರು.
"ಉತ್ತಮ ಉದ್ದೇಶ ಇವರದ್ದಾಗಿದ್ದರೆ ಖಂಡಿತ ವಿಜಯಲಕ್ಷ್ಮಿ ಒಲಿಯುತ್ತಿದ್ದಳು, ಸ್ವಂತ ಸಹೋದರನ ಭವಿಷ್ಯಕ್ಕೆ ತೊಡರುಗಾಲು ಹಾಕಲೆಂದೇ ಬೆಂಗಳೂರಿನಿಂದ ಧಾವಿಸಿಬಂದು ತಿಳಿಯಾಗಿಸಬೇಕಿದ್ದ ವಾತಾವರಣವನ್ನು ಕಲುಷಿತಗೊಳಿಸಿ, ದಿಕ್ಕು ದೆಸೆ ಇಲ್ಲದಂತಾಗಿ ಹೋಗಿ ಗೂಡು ಸೇರಿಕೊಂಡಿದ್ದಾರೆ ಬೆಂಗಳೂರಿಗೆ, ಹಿಂತಿರುಗಿ ಬರುವುದು ಕನಸಿನ ಮಾತು" ಎಂದು ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಪೋಸ್ಟ್ ಹಾಕಿದ್ದರು.
ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋತಿರುವುದು 2ನೇ ಬಾರಿ. 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಗೀತಾ ಶಿವರಾಜ್ ಕುಮಾರ್ ಕಣಕ್ಕಿಳಿದಿದ್ದರು. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಚುನಾವಣೆಯಲ್ಲಿ ಅವರು 606,216 ಮತಗಳನ್ನು ಪಡೆದು ಜಯಗಳಿಸಿದರು. ಕಾಂಗ್ರೆಸ್‌ನ ಮಂಜುನಾಥ ಭಂಡಾರಿ 242,911 ಮತಗಳಿಂದ 2ನೇ ಸ್ಥಾನ, ಗೀತಾ ಶಿವರಾಜ್ ಕುಮಾರ್ 240,636 ಮತಗಳನ್ನು ಪಡೆದು 3ನೇ ಸ್ಥಾನ ಪಡೆದರು. 2024ರ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ವಿರುದ್ಧ ಗೀತಾ ಶಿವರಾಜ್ ಕುಮಾರ್ ಸೋತಿದ್ದಾರೆ.












Click it and Unblock the Notifications