ನಾನು ಸಚಿವ ಸ್ಥಾನಕ್ಕೆ ಆಕಾಂಕ್ಷಿ : ಬಿ.ಕೆ.ಸಂಗಮೇಶ್ವರ
ಶಿವಮೊಗ್ಗ, ಜುಲೈ 29 : 'ನನಗೆ ಸಚಿವ ಸ್ಥಾನ ಸಿಕ್ಕಿದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ' ಎಂದು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಹೇಳಿದರು.
ಭಾನುವಾರ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಅವರು ಮೈದುಂಬಿದ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ನಾನು ಸಚಿವ ಸ್ಥಾನಕ್ಕೆ ಆಕಾಂಕ್ಷಿಯೇ ಹೊರತು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದ ಅಕಾಂಕ್ಷಿ. ಈ ಕುರಿತು ಕಾಂಗ್ರೆಸ್ ಮುಖಂಡರಿಗೂ ಹಾಗೂ ಹೈಕಮಾಂಡ್ ನಾಯಕರಿಗೂ ತಿಳಿಸಿದ್ದೇನೆ' ಎಂದರು.

'ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ಖಾಲಿ ಇರುವ ಸ್ಥಾನವನ್ನು ಆಷಾಢ ಕಳೆದು ಶ್ರಾವಣದಲ್ಲಿ ಭರ್ತಿ ಮಾಡುವ ಸಾಧ್ಯತೆ ಇದೆ. ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಸಂಪುಟ ವಿಸ್ತರಣೆಗಾಗಿ ಕಾಯುತ್ತಿದ್ದೇನೆ' ಎಂದು ತಿಳಿಸಿದರು.

ನಿಮಗೆ ಸಚಿವ ಸ್ಥಾನ ಯಾಕೆ ಕೊಡಬೇಕು? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿ.ಕೆ.ಸಂಗಮೇಶ ಅವರು, 'ನನಗೆ ಅರ್ಹತೆಗಿಂತ ಅನುಭವವಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕನೆಂದರೆ ನಾನು ಒಬ್ಬನೇ. ಉತ್ತಮ ಕೆಲಸ ಮಾಡಿದ್ದೇನೆ. ಇಲ್ಲವೆಂದರೆ ಜನ ಈ ಬಾರಿ ನನ್ನನ್ನು ಗೆಲ್ಲಸುತ್ತಿರಲಿಲ್ಲ' ಎಂದರು.

ಉತ್ತಮ ಮಳೆ : 'ನಾನು ಶಾಸಕನಾದಾಗ ಮಾತ್ರ ಮಳೆ ಚೆನ್ನಾಗಿ ಆಗಲಿದ್ದು, ಈ ಬಾರಿಯೂ ಉತ್ತಮ ಮಳೆಯಾಗಿದೆ. ಆದ್ದರಿಂದ, ಭದ್ರಾ ಡ್ಯಾಂ ತುಂಬಿದೆ, ರೈತರ ಬದುಕು ಹಸನಾಗಲಿ' ಎಂದು ಹೇಳಿದರು.












Click it and Unblock the Notifications