ಗುವಾಹತಿ ಐಐಟಿಯಲ್ಲಿ ಶಿವಮೊಗ್ಗ ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ
ಶಿವಮೊಗ್ಗ, ಸೆಪ್ಟೆಂಬರ್ 13 : ಗುವಾಹತಿಯ ಐಐಟಿಯಲ್ಲಿ ಓದುತ್ತಿದ್ದ ಕರ್ನಾಟಕ ಮೂಲಕ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಯುವತಿ ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದವರು.
ಮೃತ ಯುವತಿಯನ್ನು ನಾಗಶ್ರೀ (18) ಎಂದು ಗುರುತಿಸಲಾಗಿದೆ. ಗುವಾಹತಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೊದಲ ವರ್ಷದ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದರು. ಡೆತ್ ನೋಟ್ ಬರೆದಿಟ್ಟು ನಾಗಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ.
'ನನಗೆ ಟೀಚರ್ ಆಗುವ ಆಸೆ ಇತ್ತು. ಇಂಜಿನಿಯರ್ ಆಗಲು ಇಷ್ಟವಿರಲಿಲ್ಲ' ಎಂದು ನಾಗಶ್ರೀ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಮಿಂಗಾವ್ ವಲಯದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬುಧವಾರ ಬೆಳಗ್ಗೆ ಆರೋಗ್ಯ ಸರಿ ಇಲ್ಲ ಕಾಲೇಜಿಗೆ ಬರುವುದಿಲ್ಲ ಎಂದು ನಾಗಶ್ರೀ ಗೆಳತಿಗೆ ತಿಳಿಸಿದ್ದರು. ಹಾಸ್ಟೆಲ್‌ನಲ್ಲಿನ ಫ್ಯಾನ್‌ಗೆ ನೇಣು ಬಿಗಿದುಕೊಂಡು ನಾಗಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದು, ಮೊದಲು ಸೆಕ್ಯೂರಿಟಿ ಗಾರ್ಡ್ ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ಕೊಠಡಿಯೊಳಗೆ ಪ್ರವೇಶಿಸಿದರು. ವೈದ್ಯರು ಬಂದು ಪರಿಶೀಲಿಸಿ ನಾಗಶ್ರೀ ಮೃತಪಟ್ಟಿದ್ದಾಳೆ ಎಂದು ಖಚಿತಪಡಿಸಿದರು. ಹೊಸನಗರದಲ್ಲಿರುವ ಆಕೆಯ ಪೋಷಕರಿಗೆ ವಿಚಾರ ತಿಳಿಸಲಾಗಿದೆ.
'ನಾಗಶ್ರೀ ಕೊಠಡಿಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೆಕ್ಯೂರಿಟಿ ಗಾರ್ಡ್ ಮೊದಲು ಇದನ್ನು ನೋಡಿದ್ದಾನೆ' ಎಂದು ಐಐಟಿಯ ವಕ್ತಾರರು ಹೇಳಿದ್ದಾರೆ.












Click it and Unblock the Notifications