ಹಿಜಾಬ್ vs ಕೇಸರಿ ವಿವಾದ: ಶಿವಮೊಗ್ಗದ ಕಾಲೇಜುಗಳಲ್ಲಿ ಕಲ್ಲುತೂರಾಟ; ಲಾಠಿ ಪ್ರಹಾರ
ಶಿವಮೊಗ್ಗ ಫೆಬ್ರವರಿ 8: ಕರ್ನಾಟಕದ ಶಾಲಾ- ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸುವಂತೆ ರಾಜ್ಯ ಸರ್ಕಾರದ ಆದೇಶದ ಹೊರತಾಗಿಯೂ, ಹಿಜಾಬ್ ಪರ ಮತ್ತು ವಿರುದ್ಧ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ.
ರಾಜ್ಯ ಸರ್ಕಾರ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶಿಸಿದ್ದರೂ ರಾಜ್ಯದ ಅನೇಕ ಜಿಲ್ಲೆಗಳ ಕಾಲೇಜುಗಳಲ್ಲಿ ಹಿಜಾಬ್ ಕೇಸರಿ ಶಾಲು ಬಿಸಿ ಇನ್ನೂ ಹೆಚ್ಚಾಗಿದೆ. ಇದರ ನಡುವೆ ಹಿಜಾಬ್ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇಂದು ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಈ ಮಧ್ಯೆಯೇ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಹಿಜಾಬ್- ಕೇಸರಿ ಶಾಲು ಸಂಘರ್ಷ ಭುಗಿಲೆದ್ದಿದ್ದು, ಶಿವಮೊಗ್ಗದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಾರಿಸುವ ಸ್ಥಳದಲ್ಲಿ ಭಗವಾ (ಕೇಸರಿ) ಧ್ವಜ ಹಾರಿಸಿದ್ದಾರೆ.

ಶಿವಮೊಗ್ಗದ ಬಹುತೇಕ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಸಹ್ಯಾದ್ರಿ ಕಾಲೇಜು, ಸರಕಾರಿ ಪದವಿ ಕಾಲೇಜು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸರಕಾರಿ ಪದವಿ ಕಾಲೇಜಿನಲ್ಲಿ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಆಗಮಿಸಿದ್ದಾರೆ.

ಶಿವಮೊಗ್ಗದಲ್ಲಿ ಕಲ್ಲು ತೂರಾಟದ ಬಳಿಕವೂ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆಸಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪೊಲೀಸರು ಭದ್ರತೆ ನೀಡಿದ್ದಾರೆ.
ಹೈಕೋರ್ಟ್ ವಿಚಾರಣೆ ನಡೆಸುತ್ತಿರುವಾಗಲೇ ರಾಜ್ಯಾದ್ಯಂತ ಹಿಜಾಬ್- ಕೇಸರಿ ಶಾಲು ಸಂಘರ್ಷ ವಿಕೋಪಕ್ಕೆ ತಿರುಗುತ್ತಿದೆ. ರಾಜ್ಯದ ಹಲವು ಕಾಲೇಜುಗಳಲ್ಲಿ ಕಲ್ಲು ತೂರಾಟ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ರಿಸಲು ಆಯಾ ಕಾಲೇಜಿನ ಆಡಳಿತ ಮಂಡಳಿಗಳು ಹಾಗೂ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.












Click it and Unblock the Notifications