ಕೊರೊನಾ ಸಂಕಷ್ಟಕ್ಕೆ ದೇಸಿ ಚಿಂತನೆಯ "ಚರಕ" ಸಂಸ್ಥೆ ಸ್ಥಗಿತ
ಶಿವಮೊಗ್ಗ, ಸೆಪ್ಟೆಂಬರ್ 2: ಕೊರೊನಾದಿಂದಾಗಿ ಹಲವು ಉದ್ಯಮಗಳು ಆರ್ಥಿಕ ಹಿಂಜರಿತ ಅನುಭವಿಸುತ್ತಿವೆ. ಇದೀಗ ರಾಷ್ಟ್ರವ್ಯಾಪಿ ಕೈಮಗ್ಗದ ಉತ್ಪನ್ನ ತಯಾರಿಕೆಗೆ ಪ್ರಸಿದ್ಧಿಯಾಗಿರುವ ಸಾಗರದ ಹೆಗ್ಗೋಡಿನ ಚರಕ ನೇಕಾರಿಕಾ ಸಂಸ್ಥೆಯೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸ್ಥಗಿತಗೊಂಡಿದೆ.
Recommended Video
ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಸರ್ಕಾರದ ನೆರವೂ ಸಿಗದೇ ಸಂಸ್ಥೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಅಧೀಕೃತವಾಗಿ ಘೋಷಿಸಲಾಗಿದೆ. ಕೊರೊನಾ ಸಂಕಷ್ಟದಲ್ಲೂ ಚರಕ ಸಂಸ್ಥೆ ತನ್ನ ಚಟುವಟಿಕೆಯನ್ನು ಮುಂದುವರೆಸಿತ್ತು. 800ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಪೂರ್ಣ ವೇತನ ನೀಡಿತ್ತು. ಆದರೆ ಈ ಸಮಯದಲ್ಲಿ ಮೂರು ಕೋಟಿ ರೂ.ಗೂ ಹೆಚ್ಚಿನ ಕೈಮಗ್ಗ ಉತ್ಪನ್ನಗಳು ಮಾರಾಟವಾಗದಿರುವುದರಿಂದ ಮತ್ತು ಸರ್ಕಾರರಿಂದ ಯಾವುದೇ ಸಹಕಾರ ಸಿಗದ ಕಾರಣದಿಂದ ಆ. 28ರಂದು 'ನಾವು ದಿವಾಳಿ' ಎಂದು 'ಚರಕ'ದ ಕಾರ್ಯದರ್ಶಿ ಪ್ರತಿಭಾ ಎಂ.ವಿ. ಪ್ರಕಟಿಸಿದ್ದಾರೆ.
ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಂಸ್ಥೆಯು ನೇಕಾರಿಕೆ ಕಾರ್ಯ ನಿರ್ವಹಿಸುತ್ತಿತ್ತು. ಮೂರು ಜಿಲ್ಲೆಗಳಲ್ಲಿ ಸಂಸ್ಥೆಯ ಗಾರ್ಮೆಂಟ್ ವಿಭಾಗ, ವಸ್ತ್ರ ಮುದ್ರಣ ವಿಭಾಗ, ಕಸೂತಿ ವಿಭಾಗ ಚಟುವಟಿಕೆ ನಡೆಸುತ್ತಿತ್ತು. ನೈಸರ್ಗಿಕ ಬಣ್ಣಗಾರಿಕೆಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯೂ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಈ ಎಲ್ಲಾ ವಿಭಾಗಗಳೂ ಸ್ಥಗಿತಗೊಂಡಿವೆ ಎಂದು ದೇಸೀ ಚಿಂತಕ ಪ್ರಸನ್ನ ಅಧಿಕೃತವಾಗಿ ಘೋಷಿಸಿದ್ದಾರೆ.

ನೇಕಾರರ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲು ಪ್ರಸನ್ನ ಅವರು ಈಚೆಗೆ ಎಂಟು ದಿನಗಳ ಕಾಲ ಉಪವಾಸ ವ್ರತ ಕೈಗೊಂಡಿದ್ದರು. ಆಗ ಸರ್ಕಾರ 'ಪವಿತ್ರ ವಸ್ತ್ರ' ಹೆಸರಿನಲ್ಲಿ 60 ಲಕ್ಷ ರೂ.ಗಳ ಅನುದಾನ ಮಂಜೂರು ಮಾಡಿತ್ತು. ನೇಕಾರಿಕೆಯ ಅಭೀವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಾಕಷ್ಟು ಯೋಜನೆ ಮತ್ತು ಅನುದಾನ ಮಂಜೂರು ಮಾಡಿದೆ. ಆದರೆ ಇದುವರೆಗೂ ಯಾವುದೇ ಅನುದಾನದ ಹಣ ಸಂಸ್ಥೆಯನ್ನು ತಲುಪಿಲ್ಲ ಎಂದು ಪ್ರಸನ್ನ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ದೇಸೀ ಚಿಂತನೆಯಲ್ಲಿ ನಿರ್ಮಾಣಗೊಂಡ ಚರಕ ಸಂಸ್ಥೆಯೂ ಸ್ಥಗಿತಗೊಂಡಿದೆ.












Click it and Unblock the Notifications