ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕೇಸ್, ಶಿವಮೊಗ್ಗಕ್ಕೆ ಎನ್ಐಎ ಟೀಮ್
ಶಿವಮೊಗ್ಗ, ಜೂನ್ 30: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್ಐಎ) ಅಧಿಕಾರಿಗಳ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ. ವಿವಿಧ ರಾಜ್ಯದ ಹಿರಿಯ ಅಧಿಕಾರಿಗಳ ತಂಡ ಶಿವಮೊಗ್ಗಕ್ಕೆ ಆಗಮಿಸಿದ್ದು, ವಿವಿಧೆಡೆ ಪರಿಶೀಲನೆ ನಡೆಸುತ್ತಿದ್ದಾರೆ.
ಬುಧವಾರ ರಾತ್ರಿ ಒಟ್ಟು 8 ವಾಹನಗಳಲ್ಲಿ 30 ರಾಷ್ಟ್ರೀಯ ತನಿಖಾ ದಳದ ಹಿರಿಯ ಅಧಿಕಾರಿಗಳ ತಂಡ ಶಿವಮೊಗ್ಗಕ್ಕೆ ಆಗಮಿಸಿತ್ತು. ಗುರುವಾರ ಪ್ರಕರಣದ ಆರೋಪಿಗಳ ಮನೆ ಸೇರಿದಂತೆ ಬೆಳಗ್ಗೆಯಿಂದ ನಗರದ 18 ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಶಿವಮೊಗ್ಗಕ್ಕೆ ಆಗಮಿಸಿರುವ ತಂಡದಲ್ಲಿ ಕೇರಳ, ಆಂಧ್ರದವರಾಗಿದ್ದಾರೆ. ಇವರ ಜೊತೆಗೆ ಜಿಲ್ಲೆಯ ಅಧಿಕಾರಿಗಳು ಸೇರಿ ಒಟ್ಟು 90 ಅಧಿಕಾರಿಗಳು ವಿವಿಧ ಸ್ಥಳಗಳಿಗೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ಬೆಳಗ್ಗೆ ಐದು ಗಂಟೆಗೆ ದಾಳಿ ಆರಂಭವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 13 ಕಡೆ ವಿಚಾರಣೆ ನಡೆಸಲಾಗಿದೆ. ಬೆಳಿಗ್ಗೆ 10 ಗಂಟೆಯೊಳಗೆ ವಿಚಾರಣೆ ಮುಗಿಸಿ ವಾಪಸ್ ತೆರಳಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಅಧಿಕಾರಿಗಳು ಸುಮಾರು 450 ಮಂದಿಯನ್ನು ವಿಚಾರಣಗೆ ಒಳಪಡಿಸಿದ್ದಾರೆ.

ಫೆಬ್ರವರಿ 20ರಂದು ರಾತ್ರಿ 9 ಗಂಟೆ ಸಮಯದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹರ್ಷನ ಶವಯಾತ್ರೆ ವೇಳೆ ನಡೆದ ಗಲಭೆಗೆ ಸಂಬಂಧಿಸಿದಂತೆ 35 ಪ್ರಕರಣಗಳು ದಾಖಲಾಗಿವೆ.












Click it and Unblock the Notifications