ಎಪಿಎಂಸಿಗಳಲ್ಲಿ ಅಡಿಕೆ ನೇರ ಖರೀದಿಗೆ ತಡೆ, ಅಡಿಕೆ ಬೆಳೆಗಾರರಿಗೆ ಸಿಕ್ಕಿತು ಸಿಹಿಸುದ್ದಿ
ಶಿವಮೊಗ್ಗ, ಮಾರ್ಚ್ 23: ಮಲೆನಾಡು ಭಾಗದ ಅಡಿಕೆ ಬೆಳೆಗಾರರಿಗೆ ಮಹತ್ವದ ಸುದ್ದಿಯೊಂದಿದೆ. ಕರ್ನಾಟಕ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ಅಡಿಕೆ ನೇರ ಖರೀದಿಗೆ ಕಡಿವಾಣ ಹಾಕಲಿದೆ. ಇದರಿಂದಾಗಿ ಸಹಕಾರಿ ಸಂಘಗಳು ಅಡಿಕೆ ಖರೀದಿ ಮಾಡಲು ಬೆಂಬಲ ದೊರೆಯಲಿದ್ದು, ಕ್ಯಾಂಪ್ಕೋ, ಮ್ಯಾಮ್ಕೋಸ್‌ನಂತಹ ಸಂಸ್ಥೆಗಳಲ್ಲಿ ಅಡಿಕೆ ಉತ್ತಮ ದರಕ್ಕೆ ಮಾರಾಟವಾಗಲಿದೆ. ಇದರಿಂದಾಗಿದ ರೈತರಿಗೆ ಉತ್ತಮ ಬೆಲೆ ಸಿಕ್ಕಿ ಸಹಾಯಕವಾಗಲಿದೆ.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಸಾಗರ ಶಾಸಕ ಬೇಳೂರು ಗೋಪಾಕೃಷ್ಣ ನೇತೃತ್ವದಲ್ಲಿ ಸಹಕಾರ ಸಂಘಗಳ ಮುಖಂಡರು ಬೆಂಗಳೂರಿನಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಭೇಟಿ ಮಾಡಿ, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಆಗ ಸಚಿವರು ಎಪಿಎಂಸಿಗಳಲ್ಲಿ ನೇರ ಅಡಿಕೆ ಖರೀದಿಗೆ ಖಾಸಗಿ ಅವರಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಸಚಿವರು ಅಧಿಕಾರಿಗಳಿಗೆ ಎಪಿಎಂಸಿಯಲ್ಲಿ ಅಡಿಕೆ ನೇರ ಖರೀದಿ ಮೂಲಕ ಸಂಗ್ರಹವಾಗುವ ಸೆಸ್ ಮತ್ತು ಕ್ಯಾಂಪ್ಕೋ, ಮ್ಯಾಮ್ಕೋಸ್‌ನಂತಹ ಸಂಸ್ಥೆಗಳಲ್ಲಿ ಅಡಿಕೆ ಖರೀದಿ ಮೂಲಕ ಸಂಗ್ರಹವಾಗುವ ಸೆಸ್ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಎಪಿಎಂಸಿಯಲ್ಲಿ ಅಡಿಕೆ ನೇರ ಖರೀದಿಗೆ ತಡೆ ಬಿದ್ದರೆ ಕ್ಯಾಂಪ್ಕೋ, ಮ್ಯಾಮ್ಕೋಸ್‌ನಲ್ಲಿ ಖರೀದಿ ಹೆಚ್ಚಾಗಲಿದೆ.
ಖಾಸಗಿ ಎಪಿಎಂಸಿ ಬಂದ್: ಸಚಿವರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಖಾಸಗಿ ಎಪಿಎಂಸಿಗಳನ್ನು ಬಂದ್ ಮಾಡಬೇಕು. ಹೊಸ ಖಾಸಗಿ ಎಪಿಎಂಸಿ ತೆರೆಯಲು ಸರ್ಕಾರ ಅವಕಾಶವನ್ನು ನೀಡಬಾರದು ಎಂದು ಮನವಿ ಸಲ್ಲಿಸಿದರು. ಸಚಿವರು, "ಖಾಸಗಿ ಎಪಿಎಂಸಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸರ್ಕಾರದ ಎಪಿಎಂಸಿಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ ರೈತರಿಗೆ ಮೂಲ ಸೌಕರ್ಯ ಒದಗಿಸಲಾಗುತ್ತದೆ" ಎಂದರು.
ಸಚಿವರು ಮಾತನಾಡಿ, "ರಾಜ್ಯದ ಹಲವು ಎಪಿಎಂಸಿಗಳಲ್ಲಿ ಕೃಷಿಯೇತರ ವಹಿವಾಟು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಿರಾಣಿ, ಸಿಮೆಂಟ್, ಸ್ಟೀಲ್ ವಿತರಕರು, ಪ್ಲಾಸ್ಟಿಕ್ ವ್ಯಾಪಾರಿಗಳು ಇದ್ದಾರೆ. ಎಪಿಎಂಸಿ ಸಂಪೂರ್ಣ ಕೃಷಿ ವಹಿವಾಟಿಗೆ ಸೀಮಿತವಾಗಬೇಕು. ಇದಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಭರವಸೆ ನೀಡಿದರು.
"ಅಡಿಕೆ ಖರೀದಿ ಮಾಡುವ ಕೆಲವು ವರ್ತಕರು ತೆರಿಗೆ ವಂಚನೆ ಮಾಡುವುದನ್ನು ತಡೆಯಲು ವಿಚಕ್ಷಣ ದಳವನ್ನು ರಚನೆ ಮಾಡಲಾಗಿದೆ. 4 ಚೆಕ್‌ಪೋಸ್ಟ್ ಸಹ ತೆರೆಯಲಾಗುತ್ತದೆ. ಅಡಿಕೆ ದಾಸ್ತಾನು ಮಾಡುವ ಗೋದಾಮುಗಳ ಬಾಡಿಗೆಯನ್ನು ಶೇ 40ರಷ್ಟು ಕಡಿಮೆ ಮಾಡಲಾಗಿದೆ. ಎಪಿಎಂಸಿಗೆ ಮಾಹಿತಿ ಇಲ್ಲವಾದಲ್ಲಿ ಬಾಡಿಗೆ ದರದ ಕುರಿತು ಇನ್ನೊಮ್ಮೆ ಆದೇಶವನ್ನು ಹೊರಡಿಸಲಾಗುತ್ತದೆ" ಎಂದು ಸಚಿವರು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಯುವ ಹಲವು ರೈತರು ಅಡಿಕೆಯನ್ನು ನೇರವಾಗಿ ಕ್ಯಾಂಪ್ಕೋ, ಮ್ಯಾಮ್ಕೋಸ್‌ಗೆ ಹಾಕುತ್ತಾರೆ. ಆದರೆ ಎಪಿಎಂಸಿಯಲ್ಲಿ ವರ್ತಕರು ನೇರವಾಗಿ ಖರೀದಿ ಮಾಡುವುದರಿಂದ ಕ್ಯಾಂಪ್ಕೋ, ಮ್ಯಾಮ್ಕೋಸ್‌ನಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ. ಈಗ ಎಪಿಎಂಸಿಯಲ್ಲಿ ನೇರ ಖರೀದಿಗೆ ಕಡಿವಾಣ ಹಾಕಿದರೆ ರೈತರಿಗೆ ಅನುಕೂಲವಾಗಲಿದೆ.












Click it and Unblock the Notifications