ಡಾ.ರಾಜ್ ಸೊಸೆ ಸ್ಪರ್ಧೆ: ಶಿವಮೊಗ್ಗದಲ್ಲಿ ಬಿರುಗಾಳಿ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಚುನಾವಣಾ ಕಣಕ್ಕೆ ಇಳಿಯುತ್ತಿರುವುದು ಗೊತ್ತೇ ಇದೆ. ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ನಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ತಿದ್ದಾರೆ. ಸದಾ ರಾಜಕೀಯದಿಂದ ಸಾವಿರಾರು ಮೈಲಿ ದೂರ ಇದ್ದ ಡಾ.ರಾಜ್ ಕುಮಾರ್ ಅವರ ಮುದ್ದಿನ ಸೊಸೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರಿಗೇನೋ ರಾಜಕೀಯ ಇಷ್ಟವಿರಲಿಲ್ಲ. ಅದು ಅವರ ವೈಯಕ್ತಿಕ ವಿಚಾರವಾಯಿತು. ತಮ್ಮ ಮಕ್ಕಳು, ಕುಟುಂಬಿಕರು ಯಾರೂ ರಾಜಕೀಯಕ್ಕೆ ಬರಬೇಡಿ ಎಂದೇನು ಅವರು ಹೇಳಿಲ್ಲವಲ್ಲಾ?
ಇರಲಿ ವಿಷಯ ಇದಲ್ಲ. ಗೋಕಾಕ್ ಚಳವಳಿಗೆ ಧುಮುಕುವ ಮೂಲಕ ಡಾ.ರಾಜ್ ಅವರು ಚಳವಳಿಗೆ ಹೊಸ ಸ್ಫೂರ್ತಿ ತುಂಬಿದ್ದರು. ಆಗಲೂ ಅವರನ್ನು ರಾಜಕೀಯಕ್ಕೆ ಕರೆತರುವ ವಿಫಲ ಪ್ರಯತ್ನಗಳು ನಡೆದವು. ಆದರೆ ರಾಜ್ ರಾಜಕೀಯಕ್ಕೆ ಬರಲೇ ಇಲ್ಲ. ಅವರು ಅಭಿಮಾನಿ ದೇವರುಗಳ ಹೃದಯಸಿಂಹಾಸನ ಅಲಂಕರಿಸಿದ್ದರು.

ಇನ್ನು ಗೀತಾ ಅವರ ಬೆಂಬಲಕ್ಕೆ ಶಿವರಾಜ್ ಕುಮಾರ್ ಅವರು ನಿಂತಿದ್ದಾರೆ. ಅವಶ್ಯಕತೆ ಬಿದ್ದರೆ ಗೀತಾ ಪರ ಪ್ರಚಾರವನ್ನೂ ಮಾಡ್ತೀನಿ ಎಂದಿದ್ದಾರೆ. ಆದರೆ ಶಿವಣ್ಣ ಅಭಿಮಾನಿಗಳು ಮಾತ್ರ ರಾಜಕೀಯ ಬೇಡ ಎಂದು ಗೋಗರೆಯುತ್ತಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಅವರು ಗೆಲ್ತಾರೋ ಬಿಡ್ತಾರೋ ಎಂಬುದಕ್ಕಿಂತಲೂ ಅವರು ರಾಜಕೀಯಕ್ಕೆ ಇಳಿದಿರುವುದೇ ಚರ್ಚನೀಯ ವಿಷಯವಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ನಿಂದ ಕುಮಾರ ಬಂಗಾರಪ್ಪ ಕಣಕ್ಕಿಳಿಯುತ್ತಿದ್ದಾರೆ. ರಾಜಕೀಯ ಅಂದಮೇಲೆ ಅಣ್ಣತಂಗಿಯರ ಅನುಬಂಧ ಜನುಮ ಜನುಮದ ಸಂಬಂಧಗಳಿಗೆ ಅರ್ಥವಿರಲ್ಲ ಅಲ್ಲವೆ?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದು ಹಳೆ ಹುಲಿ ವಿರುದ್ಧ ಹೊಸ ಚಿಗರೆ ಎಷ್ಟರ ಮಟ್ಟಿಗೆ ಗೆಲ್ಲುತ್ತದೆ ಎಂಬ ಕುತೂಹಲ ಮೂಡಿಸಿದೆ. ಶಿವಮೊಗ್ಗ ಕ್ಷೇತ್ರದ ಈ ಬಾರಿಯ ಚುನಾವಣೆ ಎರಡು ಕುಟುಂಬಗಳ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದ ಬಂಗಾರಪ್ಪ ಸೋಲು ಅನುಭವಿಸಿದ್ದರು. ನಂತರ 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಬಂಗಾರಪ್ಪ ಸೋಲು ಅನುಭವಿಸಿದ್ದರು.
ಇಷ್ಟಕ್ಕೂ "ಗೀತಾ ಶಿವರಾಜ್ ಕುಮಾರ್ ಅವರು ಚುನಾವಣೆಗೆ ಇಳೀಬೇಕಾ?" ಎಂಬ ಪ್ರಶ್ನೆಯನ್ನು ನಾವು ನಮ್ಮ ಓದುಗ ದೊರೆಗಳ ಮುಂದಿಟ್ಟಾಗ ಅವರು ಕೊಟ್ಟ ಉತ್ತರ ನೋಡಿದರೆ ನಿಮಗೂ ಅಚ್ಚರಿಯಾಗುತ್ತದೆ. ನಮ್ಮ ಮತಗಟ್ಟೆಯಲ್ಲಿ ಏನು ನಡೀತಿದೆ ನೋಡಿ. (ಒನ್ಇಂಡಿಯಾ ಕನ್ನಡ)












Click it and Unblock the Notifications