ನೀವು 2009ರಲ್ಲಿ ಸಿಎಂ ಮಕ್ಕಳು, ನಾವು 1990ರಲ್ಲೇ ಸಿಎಂ ಮಕ್ಕಳು-ರಾಘವೇಂದ್ರಗೆ ಮಧು ಬಂಗಾರಪ್ಪ ಟಾಂಟ್
ಶಿವಮೊಗ್ಗ, ಮಾರ್ಚ್ 21: ನಾನು ಒಂದು ವಿಚಾರವನ್ನು ಎಲ್ಲರ ಗಮನಕ್ಕೆ ತರಲು ಬಯಸುತ್ತೇನೆ. ಗೀತಾ ಶಿವರಾಜ್‌ಕುಮಾರ್ ನನ್ನ ಅಕ್ಕ ಇರಬಹುದು, ಶಿವರಾಜ್‌ಕುಮಾರ್ ಅವರ ಧರ್ಮಪತ್ನಿ ಇರಬಹುದು, ಆದರೆ ಒಂದು ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್‌ಗೆ ಯಾವುದೇ ರೀತಿಯ ಮೀಡಿಯೇಟರ್ ಅಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಚಾರದ ವೇಳೆ ಮಾತನಾಡಿದ ಅವರು, ಯಾವ ರೀತಿ ಬಂಗಾರಪ್ಪನವರು ನಿಮ್ಮ ಸೇವೆಯನ್ನು ಮಾಡಿದರು, ಅದೇ ರೀತಿ ನೂರಕ್ಕೆ ನೂರು ಗೀತಾ ಶಿವರಾಜ್ ಕುಮಾರ್ ನೇರವಾಗಿ ನಿಮಗೆ ಸ್ಪಂದಿಸಿ ಕೆಲಸ ಮಾಡಲು ಬಂದಿದ್ದಾರೆ.

ಮುಂದೆ ಮಧು ಬಂಗಾರಪ್ಪ ಎಲ್ಲಾ ನೋಡಿಕೊಳ್ಳುವುದಿಲ್ಲ. ಇವತ್ತು ಬಂಗಾರಪ್ಪನವರ ಹೋರಾಟ ಧ್ವನಿಯನ್ನು ನಾವೇನು ಕಳೆದುಕೊಂಡಿದ್ದೇವೆ, ಆ ಧ್ವನಿಯನ್ನು ಇನ್ನುಮುಂದೆ ಗೀತಾ ಶಿವರಾಜ್‌ಕುಮಾರ್ ಅವರಿಂದ ನೀವು ಇನ್ನುಮುಂದೆ ಪಡೆಯಬಹುದು ಎಂದು ಭರವಸೆ ನೀಡಿದ್ದಾರೆ.
ರಾಘವೇಂದ್ರ ಅವರೇ ನೀವು ಕೂಡ ಹದಿನೈದು ವರ್ಷಗಳ ಹಿಂದೆ ಏನು ಮಾಡಿದ್ದೀರಿ. ನಿಮ್ಮ ತಂದೆ ಮಾಡಿದ ಭ್ರಷ್ಟಾಚಾರದ ಹಣದಿಂದ ನೀವಿಂದು ಸಂಸದರಾಗಿರುವುದು ಅಲ್ಲವೇ..? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನೀವು 2009ರಲ್ಲಿ ಮುಖ್ಯಮಂತ್ರಿಗಳ ಮಕ್ಕಳು..ನಾವು 1990ರಲ್ಲೇ ಮುಖ್ಯಮಂತ್ರಿಗಳ ಮಕ್ಕಳು. ನಮ್ಮ ತಂದೆ ಅಕ್ರಮವಾಗಿ ಯಾವುದೇ ಹಣ ಮಾಡಿಲ್ಲ. ನಮಗೂ ಅಂತಹ ಕೆಟ್ಟ ಬುದ್ಧಿ ಹೇಳಿ ಕೊಟ್ಟಿಲ್ಲ, ಚೋಟಾ ಸಿಗನೇಚರ್ ಹಾಕಿ ಯಾರನ್ನು ನಾವು ಜೈಲಿಗೆ ಕಳುಹಿಸಿಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪದ ಕುಟುಂಬದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮಾತು ಮುಂದುವರಿಸಿದ ಅವರು ನಮ್ಮ ತಂದೆ ಹೇಳಿಕೊಟ್ಟಿರುವುದು ನಿಮ್ಮ ಸೇವೆ ನೀವು ಮಾಡಿ ಎಂದು. ನಾನು ಕೂಡ ಸೋಲು ಕಂಡಿದ್ದೇನೆ. ಒಮ್ಮೆ ಅಪ್ಪಾಜಿ ಸೋತು ಕೂಡ ರಾಜಕರಣ ಮಾಡಬೇಕು ಎಂದಿದ್ದರು. ಅವರ ಕೊನೆಯುಸಿರು ಇರುವ ವರೆಗೂ ಜನ ಸೇವೆ ಮಾಡಿದ್ದಾರೆ. ನಾವು ಕೂಡ ಜನ ಸೇವೆಗೆ ಸಿದ್ಧರಿದ್ದೇವೆ. ನೀವು ಬೂತ್ ಮಟ್ಟದಲ್ಲಿ ಕೆಲಸ ಮಾಡಿ, ಪಕ್ಷದ ಪರ, ಗೀತಾ ಶಿವರಾಜ್ ಕುಮಾರ್ ಪರ ಎಂದು ಕಾರ್ಯಕರ್ತರರಲ್ಲಿ ಮನವಿ ಮಾಡಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಬಂಗಾರಪ್ಪನವರ ಕೊರತೆ ಈ ಜಿಲ್ಲೆಗೆ ಈ ರಾಜ್ಯಕ್ಕಿರುವುದು ಗೊತ್ತಿದೆ. ಹೀಗಾಗಿ ಬಂಗಾರಪ್ಪನವರ ಧ್ವನಿಯಾಗಿ, ಸಂಸತ್ತಿನಲ್ಲಿ ಗೀತಾ ಶಿವರಾಜ್ ಕುಮಾರ್ ನಿಮ್ಮ ಧ್ವನಿಯಾಗಿರುತ್ತಾರೆ ಎಂದು ಭರವಸೆ ನೀಡುತ್ತೇನೆ. ಒಳ್ಳೆ ಸಂಸದರಾಗಿ ಅವರು ಕೆಲಸ ಮಾಡುತ್ತಾರೆ. ಈ ನೆಲವತ್ತೈದು ದಿನ ನಿಮ್ಮ ಶ್ರಮ ಹಾಗೂ ಶ್ರದ್ಧೆಯನ್ನು ಧಾರೆ ಎರೆಯಿರಿ ಎಂದು ಕಾರ್ಯಕರ್ತರರಲ್ಲಿ ಮಧು ಬಂಗಾರಪ್ಪ ಹೇಳಿದ್ದಾರೆ.












Click it and Unblock the Notifications