ಶಿವಮೊಗ್ಗದಲ್ಲಿ ಕ್ಷುಲ್ಲಕ ಕಾರಣಕ್ಕೆ ವೆಂಕಟೇಶ್ ಎಂಬುವವರ ಮೇಲೆ ಹಲ್ಲೆ
ಶಿವಮೊಗ್ಗ, ಮಾರ್ಚ್ 3: ಸಾಕು ನಾಯಿ ಕರೆದುಕೊಂಡು ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯಾಳುವನ್ನು ದಾಖಲಿಸಲಾಗಿದೆ.
ಗೋಪಾಳದ ಪದ್ಮಾ ಟಾಕೀಸ್ ಬಳಿ ಗುರುವಾರ ಸಂಜೆ ಈ ಘಟನೆ ಸಂಭವಿಸಿದೆ. ಸ್ಥಳೀಯ ವೆಂಕಟೇಶ್ ಎಂಬುವವರ ಮೇಲೆ ಹಲ್ಲೆಯಾಗಿದೆ. ತಲೆಗೆ ತೀವ್ರ ಗಾಯವಾಗಿದ್ದು, ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಆದರೆ ವೆಂಕಟೇಶ್ ಅವರ ಮೇಲೆ ನಡೆಸಿರುವ ಹಲ್ಲೆಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಹೇಗಾಯ್ತು ಘಟನೆ?:
ವೆಂಕಟೇಶ್ ಅವರು ತಮ್ಮ ಮನೆ ಪಕ್ಕದ ಸರ್ಕಾರಿ ಶಾಲೆ ಬಳಿ ಸಾಕು ನಾಯಿ ಕರೆದುಕೊಂಡು ವಾಕಿಂಗ್ ಹೊರಟಿದ್ದರು. ಈ ವೇಳೆ ಶಾಲೆಯ ಗೇಟ್ ಬಳಿಯಿದ್ದ ನಾಲ್ವರು ಯುವಕರು ವೆಂಕಟೇಶ್ ಜೊತೆಗೆ ಕ್ಷುಲಕ ವಿಚಾರಕ್ಕೆ ಜಗಳ ಆರಂಭಿಸಿದ್ದಾರೆ. ಏಕಾಏಕಿ ಕಲ್ಲುಗಳನ್ನು ತೆಗೆದುಕೊಂಡು ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ತಲೆಗೆ ಗಂಭೀರ ಪೆಟ್ಟು:
ಕಲ್ಲು ತೂರಿದ್ದರಿಂದ ವೆಂಕಟೇಶ್ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಅವರು ಕೆಳಗೆ ಬೀಳುತ್ತಿದ್ದ ಹಾಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳೀಯರು ಕೂಡಲೇ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ವೆಂಕಟೇಶ್ ಅವರನ್ನು ವಾರ್ಡ್'ಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.
ಆಸ್ಪತ್ರೆಗೆ ಮುಖಂಡರ ದೌಡು:
ವೆಂಕಟೇಶ್ ಮೇಲೆ ದಾಳಿಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಹಲವು ಮುಖಂಡರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ, ಎಸ್.ದತ್ತಾತ್ರಿ, ದೀನದಯಾಳು, ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದರು. ನಡೆದ ಘಟನೆ ಕುರಿತು ವೆಂಕಟೇಶ್ ಅವರಿಂದ ಮಾಹಿತಿ ಪಡೆದುಕೊಂಡಿರು. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ವೆಂಕಟೇಶ್ ಹೇಳಿದ್ದೇನು?:
ಗುರುವಾರ ಸಂಜೆ ನಡೆದಿರುವ ಘಟನೆ ಕುರಿತು ಹಲ್ಲೆಗೊಳಗಾದ ವೆಂಕಟೇಶ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಮನೆಯಲ್ಲಿ ಯಾರೂ ಇರಲಿಲ್ಲ. ನಾಯಿಯನ್ನು ಮಹಡಿ ಮೇಲೆ ಬಿಟ್ಟಿದ್ದೆ. ಮನೆ ಬೀಗ ಹಾಕಿಕೊಂಡು ಮಹಡಿ ಮೇಲೆ ನಾಯಿಯನ್ನು ಆಟವಾಡಿಸುತ್ತಿದ್ದೆ. ನಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದವರ ಮಕ್ಕಳು ಕೂಡ ಬಂದು ಆಟವಾಡಿ ಹೋದರು. ಆಮೇಲೆ ನಾಯಿಗೆ ಚೈನ್ ಹಾಕಿಕೊಂಡು, ಮನೆಯಿಂದ ಹೊರಗೆ ಬಂದೆ. ಗೇಟ್ ತೆಗೆದು ಒಂದು ಫರ್ಲಾಂಗ್ ದೂರ ಬಂದಿದ್ದೆ. ಅಲ್ಲಿ ನಾಲ್ವರು ಯುವಕರು ಇದ್ದರು.
'ನಾಲ್ವರ ಪೈಕಿ ಒಬ್ಬಾತ 'ಯಾಕೋ ನನ್ನ ನೋಡುತ್ತಿದ್ದೀಯ' ಎಂದು ಬೈದನು. 'ನಾನೆಲ್ಲಿ ನಿನ್ನ ನೋಡಿದೆ' ಎಂದು ಕೇಳಿದೆ. ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ, ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದರು. ನಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಇದೆ ಅಂತಾ ಹೇಳುತ್ತಿದ್ದ ಹಾಗೆ ನಾಲ್ವರು ಪರಾರಿಯಾದರು. ಒಬ್ಬಾತ ಬಿಳಿ ಶರ್ಟ್ ಧರಿಸಿದ್ದ. ಆತನೆ ನನ್ನ ಮೇಲೆ ಹೆಚ್ಚು ಹಲ್ಲೆ ಮಾಡಿದ' ಎಂದು ವೆಂಕಟೇಶ್ ಆರೋಪಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ರಾಘವೇಂದ್ರ:
ವೆಂಕಟೇಶ್ ಅವರ ಮೇಲಿನ ಹಲ್ಲೆ ಕುರಿತು ಮಾಹಿತಿ ತಿಳಿಯುತ್ತಿದ್ದ ಹಾಗೆ ಸಂಸದ ರಾಘವೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ರಾಘವೇಂದ್ರ, 'ಹರ್ಷನ ಕೊಲೆ ಪ್ರಕರಣದ ಬಳಿಕ ಶಿವಮೊಗ್ಗ ಶಾಂತ ಸ್ಥಿತಿಗೆ ಬರುತ್ತಿದೆ. ಈ ನಡುವೆ ನಮ್ಮ ಮತ್ತೊಬ್ಬ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ. ಇದ್ದಕ್ಕಿದ್ದ ಹಾಗೆ ನಾಲ್ವರು ಯುವಕರು ಉರ್ದು ಭಾಷೆಯಲ್ಲಿ ಬೈದು ಹಲ್ಲೆ ನಡೆಸಿದ್ದಾರೆ.
ವೆಂಕಟೇಶ್ ಅವರ ಅಣ್ಣ ಪಕ್ಷದ ಚುಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಹಿಂದೆ ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಸರಿಯಾದ ರೀತಿಯಲ್ಲಿ ರಕ್ಷಣೆ ಕೊಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸುತ್ತೇವೆ. ಕಾನೂನು ವಿರೋಧಿ ಚಟುವಟಿಕೆ ನಡೆಸುವವರಿಗೆ ಪೊಲೀಸರು ಭಯ ಮೂಡಿಸಬೇಕು. ಅಲ್ಲಿ ಗಾಂಜಾ ಸೇರಿದಂತೆ ಬೇರೆ ಬೇರೆ ದುಶ್ಚಟಗಳಿಂದ ದಾಳಿ ನಡೆಸುತ್ತಿರುವ ಕುರಿತು ಕಾರ್ಯಕರ್ತರು ಹೇಳುತ್ತಿದ್ದಾರೆ. ಇಂತಹ ಚಟುವಟಿಕೆಗಳಿಗೆ ಕೊನೆ ಹಾಡಬೇಕು' ಎಂದು ತಿಳಿಸಿದರು.












Click it and Unblock the Notifications