ಈಶ್ವರಪ್ಪ ಬಿಜೆಪಿಗೆ ವಾಪಸ್, ವರಿಷ್ಠರ ಹಸಿರು ನಿಶಾನೆ ಮಾತ್ರ ಬಾಕಿ!
ಶಿವಮೊಗ್ಗ, ಜೂನ್ 23: ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಬಿಜೆಪಿಗೆ ವಾಪಸ್ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಈಶ್ವರಪ್ಪ ಠೇವಣಿ ಕಳೆದುಕೊಂಡು, ಸೋಲು ಕಂಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿದ್ದ ಬಿ. ವೈ. ರಾಘವೇಂದ್ರ ವಿರುದ್ಧ ಕೆ. ಎಸ್. ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದ್ದರಿಂದ ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿತ್ತು.

"ಬಿಜೆಪಿ ಎಂದರೆ ಈಶ್ವರಪ್ಪ, ಈಶ್ವರಪ್ಪ ಎಂದರೆ ಬಿಜೆಪಿ" ಎಂದು ಸದಾ ಹೇಳುವ ಕೆ. ಎಸ್. ಈಶ್ವರಪ್ಪ ಪಕ್ಷಕ್ಕೆ ವಾಪಸ್ ಆಗುವ ತಯಾರಿ ಆರಂಭಿಸಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹಿರಿಯರ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ವರಿಷ್ಠರು ಹಸಿರು ನಿಶಾನೆ ತೋರಿಸಿದರೆ ಈಶ್ವರಪ್ಪ ಕೆಲವೇ ದಿನಗಳಲ್ಲಿ ಮತ್ತೆ ಬಿಜೆಪಿಗೆ ವಾಪಸ್ ಆಗಲಿದ್ದಾರೆ.
ಲೋಕಸಭೆ ಚುನಾವಣೆ ಸೋಲು: 2018ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಈಶ್ವರಪ್ಪಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೈತಪ್ಪಿತ್ತು. ಈಶ್ವರಪ್ಪ ಆಪ್ತರಾಗಿದ್ದ ಎಸ್. ಎನ್. ಚನ್ನಬಸಪ್ಪ ಪಕ್ಷದ ಅಭ್ಯರ್ಥಿಯಾಗಿದ್ದು, ಗೆಲುವು ಸಾಧಿಸಿದ್ದಾರೆ.
ಶಿವಮೊಗ್ಗದ ಟಿಕೆಟ್ ಕೈತಪ್ಪಿದ ಈಶ್ವರಪ್ಪ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪುತ್ರ ಕೆ. ಈ. ಕಾಂತೇಶ್‌ಗೆ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಟಿಕೆಟ್ ಕಾಂತೇಶ್ ಕೈ ತಪ್ಪಿತ್ತು. ಬಸವರಾಜ ಬೊಮ್ಮಾಯಿ ಹಾವೇರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿದ್ದಾರೆ.
ಕಾಂತೇಶ್‌ಗೆ ಟಿಕೆಟ್ ಕೈ ತಪ್ಪಿದ ಬಳಿಕ ಅಸಮಾಧಾನಗೊಂಡ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವ ಘೋಷಣೆ ಮಾಡಿದರು. 'ರಾಷ್ಟ್ರ ಭಕ್ತರ ಬಳಗ' ಎಂದು ಮಾಡಿಕೊಂಡು. ನರೇಂದ್ರ ಮೋದಿ ಪ್ರಧಾನಿಯಾಗಲು ನನ್ನ ಬೆಂಬಲ ಎಂದು ಚುನಾವಣಗೆ ನಾಮಪತ್ರ ಸಲ್ಲಿಕೆ ಮಾಡಿದರು. ಯಾವ ನಾಯಕರ ಮನವೊಲಿಕೆಗೂ ಬಗ್ಗದ ಅವರು ಕಣದಲ್ಲಿ ಉಳಿದರು.
ಆದ್ದರಿಂದ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜೆಪಿ ಈಶ್ವರಪ್ಪರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 7,78,721 ಮತಗಳನ್ನು ಪಡೆದು ಜಯಗಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ 5,35,006 ಮತಗಳನ್ನು ಪಡೆದು 2ನೇ ಸ್ಥಾನ ಪಡೆದರು. 30,050 ಮತಗಳನ್ನು ಪಡೆದ ಈಶ್ವರಪ್ಪ ಠೇವಣಿಯನ್ನು ಕಳೆದುಕೊಂಡು ಸೋಲು ಕಂಡರು.
ಈಗ ಈಶ್ವರಪ್ಪ ಬಿಜೆಪಿಗೆ ವಾಪಸ್ ಆಗಲು ಬಯಸಿದ್ದಾರೆ. ಆದರೆ ಯಡಿಯೂರಪ್ಪ ಬಣ ಈಶ್ವರಪ್ಪ ಪಕ್ಷಕ್ಕೆ ಮರಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ವಿರುದ್ಧ ಹಲವಾರು ಟೀಕೆಗಳನ್ನು ಮಾಡಿದ ಅವರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಆದ್ದರಿಂದ ಈಶ್ವರಪ್ಪ ವಾಪಸ್ ಕರೆಸಿಕೊಳ್ಳುವ ವಿಚಾರವನ್ನು ಹೈಕಮಾಂಡ್ ಅಂಗಳಕ್ಕೆ ಕಳಿಸಲಾಗಿದೆ. ಬಿ. ಎಲ್. ಸಂತೋಷ್ ಮತ್ತು ಕೇಂದ್ರ ಸಚಿವ ಅಮಿತ್ ಶಾ ಈ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ವರಿಷ್ಠರು ಹಸಿರು ನಿಶಾನೆ ತೋರಿಸಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕೆ. ಎಸ್. ಈಶ್ವರಪ್ಪರನ್ನು ಮನವೊಲಿಸಲು ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸಿತು. ಕಾಂತೇಶ್‌ಗೆ ವಿಧಾನ ಪರಿಷತ್ ಸದಸ್ಯತ್ವದ ಭರವಸೆಯನ್ನು ನೀಡಿತು. ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರವಾಲ್ ಅವರು ಈಶ್ವರಪ್ಪ ನಿವಾಸಕ್ಕೆ ಮನವೊಲಿಕೆ ಮಾಡಲು ಆಗಮಿಸಿದ್ದರು.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಂದಾಗ ಸಮಾವೇಶಕ್ಕೆ ಬರುವಂತೆ ಈಶ್ವರಪ್ಪ ಆಹ್ವಾನಿಸಲಾಯಿತು. ಆದರೆ ಚುನಾವಣೆ ಗೆದ್ದು ಸಂಸತ್‌ನಲ್ಲಿಯೇ ನರೇಂದ್ರ ಮೋದಿ ಭೇಟಿಯಾಗುತ್ತೇನೆ ಎಂದು ಈಶ್ವರಪ್ಪ ಸಮಾವೇಶಕ್ಕೆ ಗೈರಾದರು. ಈಗ ಅವರು ಬಿಜೆಪಿಗೆ ವಾಪಸ್ ಆಗಲು ಒಪ್ಪಿಗೆ ಸಿಗಲಿದೆಯೇ?.












Click it and Unblock the Notifications