ಶಿವಮೊಗ್ಗ; ಬಿರು ಬೇಸಿಗೆ, ಚಿಬ್ಬಲಗುಡ್ಡೆ ದೇವರ ಮೀನುಗಳಿಗೆ ಸಮಸ್ಯೆ ಇಲ್ಲ
ಶಿವಮೊಗ್ಗ, ಏಪ್ರಿಲ್ 21; ರಾಜ್ಯದಲ್ಲಿ ಬಿಸಿಲಿನ ಝಳಕ್ಕೆ ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಜನರು ಯಾವಾಗ ಮಳೆಯಾಗಲಿದೆ? ಎಂದು ಆಕಾಶವನ್ನು ದಿಟ್ಟಿಸಿ ನೋಡುವಂತಾಗಿದೆ. ಕೃಷಿ ಚಟುವಟಿಕೆಗೆ ನೀರನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ನದಿಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಜಲಚರಗಳು ಸಂಕಷ್ಟಕ್ಕೆ ಸಿಲುಕಿವೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ಚಿಬ್ಬಲಗುಡ್ಡೆಯಲ್ಲಿಯೂ ನೀರಿನ ಕೊರತೆ ಉಂಟಾಗಿದೆ. ತುಂಗಾ ನದಿಯ ದಡದಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಾಲಯ, ಮತ್ಸಧಾಮದಲ್ಲಿ ನೀರಿನ ಹರಿವಿನ ಕೊರತೆ ಉಂಟಾಗಿದೆ. ಆದ್ದರಿಂದ ಇಲ್ಲಿರುವ ದೇವರ ಮೀನು ಎಂದೇ ಪ್ರಸಿದ್ಧವಾಗಿರುವ ಮಹಸೀರ್ ಮೀನುಗಳಿಗೆ ತೊಂದರೆ ಉಂಟಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ತೀರ್ಥಹಳ್ಳಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಸ್ತುತ ದೇವರ ಮೀನು ಎಂದೇ ಪ್ರಸಿದ್ಧವಾಗಿರುವ ಮಹಸೀರ್ ಮೀನುಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಿದ್ದಾರೆ. ಚಿಬ್ಬಲಗುಡ್ಡೆ ತುಂಗಾನದಿ ಭಾಗದ 500 ಮೀಟರ್ ಅನ್ನು ಮತ್ಸ್ಯಧಾಮವೆಂದು ಸರ್ಕಾರ ಘೋಷಣೆ ಮಾಡಿದೆ.
ನದಿಭಾಗದ ಸುತ್ತಮುತ್ತಲಿನ ರೈತರು ಮೋಟಾರ್ ಅಳವಡಿಸಿ ನೀರನ್ನು ತೋಟಗಳಿಗೆ ಬಳಸುತ್ತಿದ್ದು ಇದರಿಂದಾಗಿ ತುಂಗಾ ನದಿಯಲ್ಲಿನ ನೀರಿನ ಮಟ್ಟ ಕಡಿಮೆಯಾಗಿ ಮೀನುಗಳು ಮರಣ ಹೊಂದುತ್ತಿದೆ ಎಂದು ಸಾರ್ವಜನಿಕರು ದೂರವಾಣಿ ಮೂಲಕ ಸಲ್ಲಿಸಿದ ದೂರಿನ ಹಿನ್ನಲೆಯಲ್ಲಿ ಸಹಾಯಕ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಮತ್ಸ್ಯಧಾಮದಲ್ಲಿ ತುಂಗಾನದಿಯ ಹರಿವು ನಿಂತಿರುವುದು ಗಮನಕ್ಕೆ ಬಂದಿರುತ್ತದೆ ಮತ್ತು ತೋಟದ ಮಾಲೀಕರಿಗೆ ಮೋಟಾರ್‌ಗಳನ್ನು ತೆರವುಗೊಳಿಸಲು ತಿಳಿಸಲಾಗಿರುತ್ತದೆ. ಧಾಮದಲ್ಲಿ ಸುಮಾರು 30 ರಿಂದ 40 ದೊಡ್ಡಗಾತ್ರದ (20 ರಿಂದ 30 ಕೆಜಿ) ಮೀನುಗಳು ಹಾಗೂ ಸುಮಾರು 150 ರಿಂದ 200 ಬಲಿತ ಬಿತ್ತನೆಮರಿ ಮತ್ತು ವರ್ಷದ ಮೀನುಗಳು ಇರುತ್ತವೆ.
ಮತ್ಸ್ಯಧಾಮದ ತುಂಗಾ ನದಿಭಾಗದ ಮಡುವಿನಲ್ಲಿ 10 ಅಡಿ ನೀರು ಶೇಖರಣೆಯಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಮೀನುಗಳಿಗೆ ನೀಡುವ ಆಹಾರವನ್ನು ನಿಲ್ಲಿಸುವಂತೆ ತಿಳಿಸಲು ದಡದಲ್ಲಿರುವ ಸಿದ್ದಿವಿನಾಯಕ ಸ್ವಾಮಿ ದೇವಾಲಯದ ಸಮಿತಿಗೆ ತಿಳಿಸಲಾಗಿದೆ. 1/2 ಹೆಚ್. ಪಿ. ಮೋಟಾರ್‌ನಿಂದ ನೀರನ್ನು ಸಿಂಪಡಿಸಲು ತಿಳಿಸಲಾಗಿದೆ. ಈ ಕುರಿತು ಕ್ರಮ ವಹಿಸಲು ದೇವಾಲಯದ ಸಮಿತಿಯವರು ಒಪ್ಪಿಗೆ ನೀಡಿದ್ದು ಮೀನುಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಸಹಾಯಕ ನಿರ್ದೇಶಕರು ಹೇಳಿದ್ದಾರೆ.
ತುಂಗಾ ನದಿ ತೀರದ ಕ್ಷೇತ್ರ; ಶೃಂಗೇರಿಯ ಮೂಲಕ ಬರುವ ತುಂಗಾ ನದಿ ತೀರ್ಥಹಳ್ಳಿಯಿಂದ ಚಿಬ್ಬಲಗುಡ್ಡೆಯ ಮೂಲಕ ಮಂಡಗದ್ದೆ ಶಿವಮೊಗ್ಗದತ್ತ ಹರಿಯುತ್ತದೆ. ತೀರ್ಥಹಳ್ಳಿಯಿಂದ ಹೆದ್ದೂರು, ಕಟ್ಟೆಹಕ್ಕಲು ಮಾರ್ಗದಲ್ಲಿ ಸಂಚಾರ ನಡೆಸಿದರೆ ಚಿಬ್ಬಲಗುಡ್ಡೆ ಸಿಗುತ್ತದೆ. ದಬ್ಬಣ್ಣಗದ್ದೆ ಮತ್ತು ನಂಬಳ ಗ್ರಾಮದ ನಡುವೆ ತುಂಗಾ ನದಿಯಲ್ಲಿ ಬಗೆಬಗೆಯ ಮೀನಿನ ರಾಶಿ ಜನರನ್ನು ಸೆಳೆಯುತ್ತದೆ. ಇಲ್ಲಿನ ಶ್ರೀ ಸಿದ್ಧಿವಿನಾಯಕ ದೇವಾಲಯಕ್ಕೆ ಅಪಾರ ಭಕ್ತರಿದ್ದಾರೆ. ಸಂಕಷ್ಟ ಚತುರ್ಥಿಯಂದು ತೀರ್ಥಹಳ್ಳಿ ಮಾತ್ರವಲ್ಲದೇ ಹೊರ ಜಿಲ್ಲೆ, ತಾಲೂಕುಗಳಿಂದಲೂ ಭಕ್ತರು ಆಗಮಿಸುತ್ತಾರೆ.
ಮಲೆನಾಡಿನ ಅನೇಕ ಪರಿಚಯದಲ್ಲಿ, ರಾಷ್ಟ್ರಕವಿ ಕುವೆಂಪುರವರ ಅನೇಕ ಕೃತಿಗಳಲ್ಲಿ ಚಿಬ್ಬಲಗುಡ್ಡೆಯ ಉಲ್ಲೇಖವಿದೆ. ಇಲ್ಲಿನ ಮತ್ಸಧಾಮದ ಸಂರಕ್ಷಣೆಯ ಹೊಣೆಯನ್ನು ಮೀನುಗಾರಿಕಾ ಇಲಾಖೆ ಹೊತ್ತುಕೊಂಡಿದೆ. ಇಲ್ಲಿಗೆ ಆಗಮಿಸುವ ಅನೇಕ ಪ್ರವಾಸಿಗರು ಮೀನುಗಳನ್ನು ಕಣ್ತುಂಬಿಕೊಂಡು ಅವುಗಳಿಗೆ ಅಕ್ಕಿ, ಮಂಡಕ್ಕಿ ಹಾಕಿ, ಶ್ರೀ ಸಿದ್ಧಿವಿನಾಯಕ ಸ್ವಾಮಿ ದರ್ಶನ ಪಡೆದು ವಾಪಸ್ ಆಗುತ್ತಾರೆ.
ಆದರೆ ಈ ಬಾರಿಯ ಬೇಸಿಗೆಯಲ್ಲಿ ತುಂಗಾ ನದಿ ನೀರಿನ ಮಟ್ಟ ಭಾರೀ ಇಳಿಕೆಯಾಗಿದ್ದು ಚಿಬ್ಬಲಗುಡ್ಡೆಯ ಮತ್ಸಧಾಮದಲ್ಲಿ ನೀರಿನ ಕೊರತೆ ಎದುರಾಗಿದೆ. ಇರುವ ಸ್ವಲ್ಪ ನೀರು ಕಾದು ಕೆಲವು ಮೀನುಗಳು ಮೃತಪಟ್ಟಿದ್ದವು. ಈ ಕುರಿತು ಸ್ಥಳೀಯರು ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಿದ್ದರು.












Click it and Unblock the Notifications