ಶಿವಮೊಗ್ಗದಲ್ಲಿ ಹೋಂ ಕ್ವಾರಂಟೈನ್ ಉಲ್ಲಂಘಿಸಿ ಕ್ರಿಕೆಟ್ ಆಡಿದ ಇಬ್ಬರ ಮೇಲೆ ಕೇಸ್
ಶಿವಮೊಗ್ಗ, ಮಾರ್ಚ್ 26: ಹೋಂ ಕ್ವಾರಂಟೈನ್ ವಿಧಿಸಿದ್ದರೂ ಮನೆಯಲ್ಲಿರದೇ ಆದೇಶ ಉಲ್ಲಂಘಿಸಿ ಹೊರಗೆ ಸುತ್ತಾಡಿ ಕ್ರಿಕೆಟ್ ಆಡಿದ ಇಬ್ಬರ ವಿರುದ್ಧ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶದಿಂದ ಭಾರತಕ್ಕೆ ಹಿಂದಿರುಗುವ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ 14 ದಿನಗಳು ಯಾರ ಸಂಪರ್ಕಕ್ಕೂ ಬಾರದೆ, ಮನೆಯಲ್ಲಿಯೇ ಉಳಿದು ಹೋಂ ಕ್ವಾರಂಟೈನ್ ನಲ್ಲಿರಬೇಕೆಂದು ಆದೇಶವಿದೆ. ಆದರೂ ಅದನ್ನು ಲೆಕ್ಕಿಸದೇ ಮಾ.12ರಂದು ಅಬುದಾಬಿಯಿಂದ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿಗೆ ಹಿಂದಿರುಗಿ ಬಂದಿದ್ದ ಇಬ್ಬರು ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿ ಮನೆಯಿಂದ ಹೊರಬಂದು ಸುತ್ತಾಡಿ ಮತ್ತು ಕ್ರಿಕೆಟ್ ಆಡಿರುವ ಸಂಗತಿ ಬೆಳಕಿಗೆ ಬಂದಿದೆ.
ಸಾರ್ವಜನಿಕ ಪ್ರದೇಶದಲ್ಲಿ ಓಡಾಡಬಾರದೆಂಬ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಹೋಂ ಕ್ವಾರಂಟೈನ್ ನಿಂದ ಹೊರಗೆ ಬಿಡಬಾರದೆಂದು ತಿಳಿದಿದ್ದರೂ ಇವರು ಹೊರಗೆ ಹೋಗಲು ಅವಕಾಶ ನೀಡಿದ ಪೋಷಕರ ವಿರುದ್ಧವೂ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕು ಆರೋಗ್ಯಾಧಿಕಾರಿ ಜಗದೀಶ್ ಹಾಗೂ ತೀರ್ಥಹಳ್ಳಿ ಸಿಪಿಐ ಗಣೇಶಪ್ಪ ಅವರು ಹೋಂ ಕ್ವಾರಂಟೈನ್ ನಲ್ಲಿರುವವರನ್ನು ಪರೀಕ್ಷಿಸುವಾಗ ಇಬ್ಬರು ಮನೆಯಿಂದ ಹೊರಬಂದು ಸುತ್ತಾಡಿದ್ದಲ್ಲದೆ, ಕ್ರಿಕೆಟ್ ಆಡಿರುವುದು ತಿಳಿದುಬಂದಿದೆ.
ಇವರ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ಕಲಂ 188, 269, 270, 271 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದೆ.












Click it and Unblock the Notifications