ಹರ್ಷನ ಸಹೋದರಿ ವಿರುದ್ಧ ದೂರು, ಹಿಂದೂ ಯುವಕನ ಮೇಲೆಯೂ ಹಲ್ಲೆ
ಶಿವಮೊಗ್ಗ, ಅಕ್ಟೋಬರ್ 25: ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ, ಕೆಲವು ತಿಂಗಳ ಹಿಂದೆ ಹತ್ಯೆಗೊಳಗಾಗಿದ್ದ ಹಿಂದೂ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಸೇರಿದಂತೆ ಸುಮಾರು 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಆಜಾದ್ ನಗರದ ನಿವಾಸಿಯಾಗಿರುವ ಸೈಯದ್ ಪರ್ವೀಜ್ ದೂರು ನೀಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿಗೆ ಅಶ್ವಿನಿ ಸೇರಿದಂತೆ ಸುಮಾರು 15 ಮಂದಿ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ 22ರಂದು ಶಿವಮೊಗ್ಗದ ಸೀಗೆಹಟ್ಟಿ ನಿವಾಸಿ ಅಶ್ವಿನಿ ಸೇರಿದಂತೆ ಸುಮಾರು 15 ಮಂದಿ, ಕಲ್ಲಪ್ಪನ ಕೇರಿಯಿಂದ ಬೈಕಿನಲ್ಲಿ ಮರವಣಿಗೆ ಮಾಡಿಕೊಂಡು ಬಂದರು. ಕೇಸರಿ ಧ್ವಜಗಳನ್ನು ತಿರುಗಿಸುತ್ತ, ಘೋಷಣೆ ಕೂಗುತ್ತ ಬಂದವರು ತಮ್ಮ ಮನೆ ಎದುರು ನಿಲ್ಲಿಸಿದ್ದ ಕಾರಿಗೆ ಹಾನಿ ಉಂಟು ಮಾಡಿದ್ದಾರೆ. ಕಾರಿನ ಎಡ ಭಾಗದ ಹೆಡ್ ಲೈಟ್, ಸೈಟ್ ಡೊರ್, ಹಿಂಬದಿಯ ಮಡ್ ಗಾರ್ಡ್ ಜಖಂ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಹರ್ಷ ಸಹೋದರಿ ವಿರುದ್ಧ ಆರೋಪ
ಅ.22ರಂದು ಶಿವಮೊಗ್ಗದಲ್ಲಿ ಸಾರ್ವಕರ್ ಸಾಮ್ರಾಜ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿವಮೊಗ್ಗದ ನಾನಾ ಭಾಗದಿಂದ ಯುವಕರು ಬೈಕ್ ಜಾಥಾ ನಡೆಸಿ, ಕಾರ್ಯಕ್ರಮದ ಸ್ಥಳದ ತಲುಪಿದ್ದರು. ಹರ್ಷ ಸಹೋದರಿ ಅಶ್ವಿನಿ ಅವರು ತಮ್ಮ ಬಡಾವಣೆಯ ಹಿಂದೂ ಸಂಘಟನೆ ಕಾರ್ಯಕರ್ತರೊಂದಿಗೆ ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಇನ್ನೋವಾ ಕಾರಿಗೆ ಅಂದಾಜು 10 - 15 ಸಾವಿರ ರೂ.ನಷ್ಟು ಹಾನಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಯುವಕನ ಮೇಲೆ ಹಲ್ಲೆ ಆರೋಪ
ಈ ಘಟನೆ ಬೆನ್ನಲ್ಲೆ ಸೋಮವಾರ ರಾತ್ರಿ ಮತ್ತೊಂದು ಅಹಿತಕರ ಘಟನೆ ನಡೆದಿದ್ದು ಬೈಕ್‌ನಲ್ಲಿ ಬಂದಂತಹ ದುಷ್ಕರ್ಮಿಗಳು ಹಿಂದೂ ಕಾರ್ಯಕರ್ತ ಪ್ರಕಾಶ್ (25) ಎಂಬ ಯುವಕನ ಮೇಲೆ ಕಲ್ಲು ತೂರಾಟ ಮಾಡಿ ಪರಾರಿಯಾಗಿದ್ದಾರೆ. ಘಟನೆಯಿಂದ ಪ್ರಕಾಶ್ ತಲೆಗೆ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬರ್ಮಪ್ಪನಗರದ 2ನೇ ಅಡ್ಡರಸ್ತೆಯಲ್ಲಿ ರಾತ್ರಿ ಘಟನೆ ಸಂಭವಿಸಿದೆ. ಸದ್ಯ ಪ್ರಕಾಶ್‌ಗೆ ಯಾವುದೆ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಗುಂಪು ಸೇರಿದ ಜನ, ಬಿಗುವಿನ ವಾತಾವರಣ
ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಸೀಗೆಹಟ್ಟಿ ಸೇರಿದಂತೆ ವಿವಿಧಡೆ ಸಂಚರಿಸಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿ ಕೂಗಾಡುತ್ತ ಸಾಗಿದ್ದಾರೆ. ವಿಚಾರ ತಿಳಿದು ಸೀಗೆಹಟ್ಟಿ ಭಾಗದಲ್ಲಿ ಗುಂಪು ಸೇರಿದೆ. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.
ಘಟನೆ ಬಗ್ಗೆ ಹೇಳಿಕೆ ನೀಡಿರುವ ಜಿಲ್ಲಾ ರಕ್ಷಾಣಾಧಿಕಾರಿ ಮಿಥುನ್ ಕುಮಾರ್ "ಬರ್ಮಪ್ಪ ಲೇಔಟ್ 2ನೇ ಕ್ರಾಸ್‌ನಲ್ಲಿ ನಡೆದ ಘಟನೆಯಲ್ಲಿ 25 ವರ್ಷದ ಪ್ರಕಾಶ್ ಎಂಬಾತನಿಗೆ ಗಾಯವಾಗಿದೆ. ತಲೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸುರಕ್ಷಿತವಾಗಿದ್ದಾರೆ. ತನ್ನ ಮೇಲೆ ಬೈಕ್‌ಮೇಲೆ ಬಂದಂತಹ 3 ಜನ ದುಷ್ಕರ್ಮಿಗಳು ಕಲ್ಲಿನಿಂದ ದಾಳಿ ಮಾಡಿ, ಅಶ್ಲೀಲವಾಗಿ ಕೂಗಾಡುತ್ತಾ ಪರಾರಿಯಾದರು ಎಂದು ಪ್ರಕಾಶ್ ತನ್ನ ಹೇಳಿಕೆ ನೀಡಿದ್ದು, ಆ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದೇವೆ'' ಎಂದು ತಿಳಿಸಿದ್ದಾರೆ.












Click it and Unblock the Notifications