ಶಿವಮೊಗ್ಗ; ರೈತಸಂಘದ ಮುಖಂಡರು ಜಿಯೋದಿಂದ ಪೋರ್ಟ್!
ಶಿವಮೊಗ್ಗ, ಡಿಸೆಂಬರ್ 28; ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ರೈತರ ಹೋರಾಟ ದೆಹಲಿಯಲ್ಲಿ ಮುಂದುವರೆದಿದೆ. ಶಿವಮೊಗ್ಗದ ರೈತಸಂಘದ ನೂರಾರು ಕಾರ್ಯಕರ್ತರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಸಾಮೂಹಿಕವಾಗಿ ಜಿಯೋ ಸಿಮ್‌ನಿಂದ ಪೋರ್ಟ್ ಆಗುವ ಮೂಲ ಬೆಂಬಲ ಕೊಟ್ಟಿದ್ದಾರೆ.
ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್. ಆರ್. ಬಸವರಾಜಪ್ಪ ನಗರದ ಶಿವಮೂರ್ತಿ ವೃತ್ತದಲ್ಲಿರುವ ಏರ್ ಟೆಲ್ ಕಚೇರಿಗೆ ಆಗಮಿಸಿದ್ದರು. ನೂರಾರು ಬೆಂಬಲಿಗರ ಜೊತೆ ಜಿಯೋ ನಂಬರ್‌ನಿಂದ ಹೊರಬಂದು ಏರ್‌ಟೆಲ್ ಚಂದಾದಾರರಾದರು. ಈ ಮೂಲಕ ರೈತ ಚಳವಳಿಯನ್ನು ಗಟ್ಟಿಗೊಳಿಸಲು ಧ್ವನಿಗೂಡಿಸಿದರು.
"ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ. ರೈತರು ಅವರ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು" ಎಂದು ಬಸವರಾಜಪ್ಪ ಹೇಳಿದರು.

ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರನ್ನು ಬೆಂಬಲಿಸಿ ಅನೇಕ ರಾಜ್ಯಗಳಲ್ಲಿ ರೈತರು ಜಿಯೋದಿಂದ ಪೋರ್ಟ್ ಆಗುತ್ತಿದ್ದಾರೆ. ಇದಿರಂದಾಗಿ ಜಿಯೋಗೆ ಇಲ್ಲಿಯ ತನಕ ಲಕ್ಷಾಂತರ ಗ್ರಾಹಕರ ನಷ್ಟವಾಗಿದೆ. ಈಗ ಕರ್ನಾಟಕದಲ್ಲಿಯೂ ಅದೇ ಮಾದರಿ ಹೋರಾಟ ಆರಂಭವಾಗಿದೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷರಾದ ಎಸ್. ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ. ಬಿ. ಜಗದೀಶ್, ಜಿಲ್ಲಾ ಮುಖಂಡರಾದ ಪಿ. ಶೇಖರಪ್ಪ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications