ಪೊಲೀಸರ ಸೋಗಿನಲ್ಲಿ ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು
ಶಿವಮೊಗ್ಗ, ಜನವರಿ 16 : ನಗರದಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದ್ದು, ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
ದಾರಿಯಲ್ಲಿ ಹೋಗುತ್ತಿರುವ ಮಹಿಳೆಯರಿಗೆ ತಾವು ಪೊಲೀಸರೆಂದು ಪರಿಚಯಿಸಿಕೊಂಡು ಒಡವೆಗಳನ್ನು ಬ್ಯಾಗ್‌ನಲ್ಲಿ ಇಡುವಂತೆ ತಿಳಿಸಿ ಖದೀಮರು ಕಳ್ಳತನ ಮಾಡಿರುವ ಅನೇಕ ಘಟನೆಗಳು ನಡೆದಿದೆ.
ಶಿವಮೊಗ್ಗದ ಗಾಂಧಿ ನಗರದಲ್ಲಿ ಬೈಕಿನಲ್ಲಿ ಬಂದ ಇಬ್ಬರು, ನಡೆದು ಹೋಗುತ್ತಿದ್ದ ಮಹಿಳೆಯನ್ನು ತಡೆದಿದ್ದಾರೆ. ನಾವು ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾರೆ. ಇಲ್ಲಿ ಕೊಲೆಯಾಗಿದೆ. ಚಿನ್ನದ ಸರ ಹಾಕಿಕೊಂಡು ಹೋಗಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅದೃಷ್ಟವಶಾತ್ ಮಹಿಳೆ ಚಿನ್ನದ ಸರ ಬಿಚ್ಚಲಿಲ್ಲ. ಸದ್ಯ ಮಹಿಳೆಯ ಒಡೆವೆಗಳು ಸುರಕ್ಷಿತವಾಗಿದ್ದು, ನಕಲಿ ಪೊಲೀಸರು ಆಕೆಯ ಒಡೆವೆಯ ಕಳ್ಳತನಕ್ಕೆ ಯತ್ನಿಸಿದ್ದರು.

ಪೊಲೀಸರ ಸೋಗಿನಲ್ಲಿ ಒಡೆವೆ ಕದ್ದ ಖದೀಮರು
ವಿದ್ಯಾನಗರ ಜಗದಂಬ ಬೀದಿಯ ಮೇರಿ ಜೋಸ್ಫಿನ್ ಅವರು ನಡೆದು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ತಾವು ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಒಡವೆಗಳನ್ನು ಹಾಕಿಕೊಂಡು ಹೀಗೆಲ್ಲಾ ಓಡಾಡಬಾರದು. ಎಲ್ಲವನ್ನು ಈಗಲೇ ಬಿಚ್ಚಿ ಬ್ಯಾಗಿನಲ್ಲಿ ಹಾಕಿಕೊಳ್ಳಿ ಎಂದು ಆದೇಶಿಸಿದ್ದಾರೆ. ಸರ, ಬಳೆಯನ್ನು ಬಿಚ್ಚಿಸಿ, ತಾವೇ ಮೇರಿ ಜೋಸ್ಫಿನ್ ಅವರ ಬ್ಯಾಗಿನಲ್ಲಿ ಇಡುವಂತೆ ನಟಿಸಿದ್ದಾರೆ. ಮನೆಗೆ ಹೋಗಿ ಮೇರಿ ಜೋಸ್ಫಿನ್ ಅವರು ಪರಿಶೀಲಿಸಿದಾಗ 3.40 ಲಕ್ಷ ರೂ. ಮೌಲ್ಯದ ಒಡವೆಗಳು ಇರಲಿಲ್ಲ ಎನ್ನಲಾಗಿದೆ.

ಅಸಲಿ ಬದಲಿಗೆ ನಕಲಿ ಚಿನ್ನವಿಟ್ಟು ಖದೀಮರು ಪರಾರಿ
ಹೊನ್ನಾಳಿಯ ಪಾರ್ವತಮ್ಮ ಅವರು ತನ್ನ ಸಹೋದರನ ಮನೆಗೆ ಭೇಟಿ ನೀಡಲು ಶಿವಮೊಗ್ಗಕ್ಕೆ ಬಂದಿದ್ದರು. ಬಸ್ ಇಳಿದು ಎನ್.ಟಿ.ರಸ್ತೆ ಮೂಲಕ ಸುಂದರ ಆಶ್ರಯ ಹೊಟೇಲ್ ಪಕ್ಕ ಗೌಡ ಸಾರಸ್ವತ ಕಲ್ಯಾಣ ಮಂದಿರಕ್ಕೆ ಹೋಗುವ ರಸ್ತೆಗೆ ತೆರಳುತ್ತಿದ್ದರು. ಅಲ್ಲೇ ನಿಂತಿದ್ದ ಮೂವರು, ತಾವು ಪೊಲೀಸರು ಎಂದು ಪರಿಚಯಿಸಿಕೊಂಡು ಪಾರ್ವತಮ್ಮ ಅವರನ್ನು ತಡೆದಿದ್ದಾರೆ. ‘ಹೀಗೆಲ್ಲ ಚಿನ್ನದ ಸರ ಹಾಕಿಕೊಂಡು ಹೋದರೆ ಕೊಲೆ ಮಾಡುತ್ತಾರೆ' ಎಂದು ಹೆದರಿಸಿದ್ದಾರೆ. ಪಾರ್ವತಮ್ಮ ಅವರ ಚಿನ್ನದ ಸರವನ್ನು ಬಿಚ್ಚಿಸಿ, ಒಂದು ಪೇಪರ್‌ನಲ್ಲಿ ಪೊಟ್ಟಣ ಕಟ್ಟಿದ್ದಾರೆ. ಸಹೋದರನ ಮೆನಗೆ ಹೋಗಿ ಪೊಟ್ಟಣ ತೆಗೆದಾಗ ನಕಲಿ ಚಿನ್ನದ ಸರವಿತ್ತು ಎನ್ನಲಾಗಿದೆ. ಈ ಘಟನೆ ಜನವರಿ 14ರಂದು ಸಂಭವಿಸಿದೆ.

ಮನೆ ಕೆಲಸ ಮಾಡುವ ಮಹಿಳೆ ಚಿನ್ನ ಕಳ್ಳತನ
ಜನವರಿ 14ರಂದು ಮಧ್ಯಾಹ್ನ ಸವಾರ್ ಲೈನ್ ರಸ್ತೆಯಲ್ಲಿ ವೈದ್ಯರೊಬ್ಬರ ಮನೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕಾಂತಮ್ಮ ಎಂಬುವವರನ್ನು ತಡೆದು, ತಾವು ಪೊಲೀಸ್ ಎಂದು ನಂಬಿಸಿದ್ದಾರೆ. ಆಕೆಯ ಕೊರಳಲ್ಲಿದ್ದ ಸರವನ್ನು ಬಿಚ್ಚಿಸಿ ಪೊಟ್ಟಣ ಕಟ್ಟಿ ಕೊಟ್ಟು, ಬೈಕಿನಲ್ಲಿ ತೆರಳಿದ್ದಾರೆ. ಮನೆಗೆ ತೆರಳಿ ಪೊಟ್ಟಣ ತೆಗೆದಾಗ ನಕಲಿ ಚಿನ್ನದ ಸರವಿರುವುದು ತಿಳಿದು ಬಂದಿದೆ.
ಶಿವಮೊಗ್ಗ ನಗರದಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಕಳೆದ 2 ತಿಂಗಳಲ್ಲಿ ನಾಲ್ಕು ಕಡೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದಾರೆ. 3 ಪ್ರಕರಣದಲ್ಲಿ ಮಹಿಳೆಯರ ಸರ, ಬಳೆಗಳನ್ನು ಲಪಟಾಯಿಸಲಾಗಿದೆ. ಕೋಟೆ ಠಾಣೆಯಲ್ಲಿ ಒಂದು, ದೊಡ್ಡಪೇಟೆ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ನಕಲಿ ಪೊಲೀಸರು ನಾಲ್ಕು ಕಡೆಯಲ್ಲಿ ಒಂದೇ ರೀತಿಯ ದುಷ್ಕೃತ್ಯ ಎಸಗಿದ್ದಾರೆ. ಹೀಗಾಗಿ ಇಂತಹವರ ಕುರಿತು ಜನರು ಜಾಗೃತರಾಗಬೇಕಿದೆ. ಮಹಿಳೆಯರು ತಮ್ಮ ಚಿನ್ನಾಭರಣದ ಕುರಿತು ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.

ಕ್ಷಣಾರ್ಧದಲ್ಲಿ ಚಿನ್ನ ಕಳ್ಳತನ ಮಾಡುವ ಚಾಣಾಕ್ಷರು
ನಾಲ್ಕು ಪ್ರಕರಣದಲ್ಲಿಯು ತಾವು ಪೊಲೀಸ್ ಎಂದು ಪರಿಚಯಿಸಿಕೊಂಡು, ಮಹಿಳೆಯರಲ್ಲಿ ಭರವಸೆ ಮೂಡುವಂತೆ ಮಾಡಿದ್ದಾರೆ. ಆ ಬಳಿಕ ಕೃತ್ಯ ಎಸಗಿದ್ದಾರೆ. ಚಿನ್ನಾಭರಣ ಬಿಚ್ಚಿಸಿಕೊಂಡ ಮರು ಕ್ಷಣ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮೂರು ಪ್ರಕರಣದಲ್ಲಿಯು ಜನ ಸಂಚಾರ ಕಡಿಮೆ ಇರುವ ಸಮಯ ಮತ್ತು ಜಾಗವನ್ನು ಆಯ್ಕೆ ಮಾಡಿಕೊಂಡು ದುಷ್ಕೃತ್ಯ ಎಸಗಿದ್ದಾರೆ. ಹಬ್ಬಗಳಂದೇ ಒಂಟಿ ಮಹಿಳೆಯರನ್ನು ಇವರು ಟಾರ್ಗೆಟ್ ಮಾಡಿಕೊಂಡಿದ್ದಾರೆ.
ಮಹಿಳೆಯರಲ್ಲಿ ಭಯ ಹುಟ್ಟಿಸಿ ಕೃತ್ಯ ಎಸಗಿದ್ದಾರೆ. ‘ಕೊಲೆಯಾಗಿದೆ', ‘ಕೊಲೆ ಮಾಡುತ್ತಾರೆ' ಎಂದು ಜೀವ ಭಯ ಮೂಡಿಸಿ, ಚಿನ್ನಾಭರಣಗಳನ್ನು ಬಿಚ್ಚಿಸಿದ್ದಾರೆ. ಚಿನ್ನಾಭರಣವನ್ನು ಬಿಚ್ಚಿಸಿದ ನಕಲಿ ಪೊಲೀಸರು ತಾವೇ ಪೊಟ್ಟಣ ಕಟ್ಟಿದ್ದಾರೆ. ನಕಲಿ ಚಿನ್ನಾಭರಣವನ್ನು ಬ್ಯಾಗಿನಲ್ಲಿ ಇಟ್ಟು ಕಳುಹಿಸಿದ್ದಾರೆ.
ಸಾರ್ವಜನಿಕರು ಇಂತಹ ಪ್ರಕರಣದ ಬಗ್ಗೆ ಎಚ್ಚರವಹಿಸಬೇಕಾಗಿದ್ದು, ಯಾರಾದರೂ ತಮ್ಮನ್ನು ತಾವು ಪೊಲೀಸರು ಎಂದು ಪರಿಚಯಿಸಿಕೊಂಡಾಗ ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ಅಥವಾ 112 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಬೇಕಿದೆ.












Click it and Unblock the Notifications