'ಯಡಿಯೂರಪ್ಪ ಸೋಲಿಸಲು ಈಶ್ವರಪ್ಪ ಸಾಕು'
ಶಿವಮೊಗ್ಗ, ಏ.8: ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪರನ್ನು ಸೋಲಿಸಲು ಅವರದೇ ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ಸಾಕು.ಈಶ್ವರಪ್ಪ ಅವರೇ ಯಡಿಯೂರಪ್ಪ ಅವರನ್ನು ಸೋಲಿಸಲು ಯತ್ನಿಸುತ್ತಿದ್ದು, ಪರೋಕ್ಷವಾಗಿ ವಿಪಕ್ಷಗಳಿಗೆ ನೆರವಾಗುತ್ತಿದ್ದಾರೆ. ಇದರಿಂದ ಶಿವಮೊಗ್ಗದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಗೆಲುವು ಮತ್ತಷ್ಟು ಸುಲಭವಾಗಲಿದೆ ಎಂದು ಜೆಡಿಎಸ್ ಪಕ್ಷದ ಶಾಸಕ ಜಮೀರ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಬಿಜೆಪಿ ತೊರೆದು ಹೋಗಿದ್ದರು. ಜೊತೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪ ಸೋಲಲು ಯಡಿಯೂರಪ್ಪ ಕಾರಣಕರ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರನ್ನು ಸೋಲಿಸುವ ಮೂಲಕ ಈಶ್ವರಪ್ಪ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಈ ಬಗ್ಗೆ ನಾನೇನು ವಿಶೇಷವಾಗಿ ಹೇಳಬೇಕಾಗಿಲ್ಲ ಎಂದರು.

ರಾಜಕಾರಣದಲ್ಲಿ ಸಾಕಷ್ಟು ಅನುಭವವಿರುವ ಯಡಿಯೂರಪ್ಪ ಯಾವುದೇ ಷರತ್ತು ವಿಧಿಸದೆ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದು ನಿಜಕ್ಕೂ ದುರ್ದೈವದ ಸಂಗತಿ. ಈ ಚುನಾವಣೆಯಲ್ಲಿ ಯಡಿಯೂರಪ್ಪ ಸೋತರೆ ಅವರ ರಾಜಕೀಯ ಜೀವನವೇ ಮುಕ್ತಾಯವಾಗುವ ಕಾರಣ, ಅವರದೇ ಪಕ್ಷದವರು ಅವರ ಸೋಲಿಗೆ ಪಣತೊಟ್ಟಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದುರ್ಬಲವಾಗಿರುವ ಕಾರಣ ಮುಸ್ಲಿಮರು ಜೆಡಿಎಸ್ ಪಕ್ಷದ ಪರ ತಮ್ಮ ಒಲವು ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವು ಖಚಿತವಾಗಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಷರೀಫ್ ಗೆ ಬ್ಲಾಕ್ ಮೇಲ್: ಜಾಫರ್ ಷರೀಫ್ ಮುಸ್ಲಿಮ್ ಸಮಾಜದ ಹಿರಿಯ ನಾಯಕರಾಗಿದ್ದಾರೆ. ಅಂಥವರಿಗೆ ಕಾಂಗ್ರೆಸ್ ಪಕ್ಷ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದು ಮುಸ್ಲಿಮ್ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ಜೆಡಿಎಸ್ ಗೆ ಸೇರ್ಪಡೆಯಾಗುವುದಾಗಿ ಹೇಳಿ ನಂತರ ಕಾಂಗ್ರೆಸ್ ನಲ್ಲಿಯೇ ಉಳಿಯಲು ನಿರ್ಧಾರ ಕೈಗೊಂಡಿರುವುದಾಗಿ ಹೇಳಿರುವ ಜಾಫರ್ ಷರೀಫ್ ವರ್ತನೆ ಸರಿಯಲ್ಲ. ಈ ಹಿಂದೆ ದೇವೇಗೌಡರ ಮನೆಗೆ ಆಗಮಿಸಿ ಬಿ ಫಾರಂ ಪಡೆದುಕೊಂಡು ಹೋಗಿದ್ದ ಷರೀಫ್ ಇದೀಗ ಏಕಾಏಕಿ ತಮ್ಮ ನಿರ್ಧಾರ ಬದಲಾಯಿಸಿದ್ದಾರೆ. ಕಾಂಗ್ರೆಸ್ ನವರನ್ನು ಬ್ಲಾಕ್ ಮೇಲ್ ಮಾಡಲು ಜೆಡಿಎಸ್ ಗೆ ಸೇರ್ಪಡೆಯಾಗಲಿರುವ ಬೆದರಿಕೆ ಹಾಕಿದ್ದರು. ಅವರೊಬ್ಬ ಗ್ರೇಟ್ ಗ್ಯಾಂಬ್ಲರ್ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ 20 ಸೀಟು ಗೆದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಜೆಡಿಎಸ್ 14ಕ್ಕೂ ಅಧಿಕ ಸೀಟು ಗೆಲ್ಲಲಿದೆ. ಇಡೀ ದೇಶದಲ್ಲಿ ತೃತೀಯ ರಂಗದ ಅಲೆ ಎದ್ದಿದೆ. ಮಾಜಿ ಪ್ರಧಾನಿ ದೇವೇಗೌಡರು ಮತ್ತೊಮ್ಮೆ ದೇಶವನ್ನು ಮುನ್ನಡೆಸುವಂತಾದರೆ ಆಶ್ಚರ್ಯವಿಲ್ಲ ಎಂದು ಜಮೀರ್ ಹೇಳಿದರು.












Click it and Unblock the Notifications