ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮಾರ್ಟ್ ಆಗಬೇಕಿದ್ದ ಶಿವಮೊಗ್ಗ ಧೂಳು ಸಿಟಿಯಾಯ್ತು, ಜನರಲ್ಲಿ ಉಲ್ಬಣಿಸಿದ ಶ್ವಾಸಕೋಶ ಸಮಸ್ಯೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 25: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಪರಿಣಾಮ ನಗರದೆಲ್ಲೆಡೆ ಧೂಳು ಆವೃತವಾಗಿದೆ. ಸಾರ್ವಜನಿಕರ ಆರೋಗ್ಯ ಹದಗೆಡುತ್ತಿದೆ. ಕೊರೊನಾಕ್ಕಿಂತಲೂ ಧೂಳಿನ ಭೀತಿಯಿಂದಾಗಿ ಮಾಸ್ಕ್ ಧರಿಸಿ ಓಡಾಡುವಂತಾಗಿದೆ.

ಸ್ಮಾರ್ಟ್ ಸಿಟಿ ಯೋಜನೆ ಅಡಿ ಏಕಕಾಲಕ್ಕೆ ಚರಂಡಿ, ರಸ್ತೆ, ಫುಟ್‌ಪಾತ್ ಹೀಗೆ ನಾನಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ, ಜನರಿಗೆ ನಿತ್ಯ ಧೂಳಿನ ಸ್ನಾನವಾಗುತ್ತಿದೆ. ಹೊರಗಡೆ ಓಡಾಡಿದರೆ ಸಾಕು ಹಲವರಲ್ಲಿ ಶೀತ, ಗಂಟಲು ನೋವು, ತಲೆ ಭಾರದ ಅನುಭವ, ಪಿತ್ತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕೊರೊನಾ ಭೀತಿಯಿಂದಾಗಿ ಜನ ಆಸ್ಪತ್ರೆಗೆ ಹೋಗದೇ ಮೆಡಿಕಲ್‌ಗಳಲ್ಲಿಯೇ ಔಷಧ ಪಡೆಯುತ್ತಿದ್ದಾರೆ. ವಿಶೇಷವೆಂದರೆ, ಇತ್ತೀಚೆಗೆ ಇಂತಹವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

 ಶ್ವಾಸಕೋಶದಲ್ಲಿ ಧೂಳು ಶೇಖರಣೆ

ಶ್ವಾಸಕೋಶದಲ್ಲಿ ಧೂಳು ಶೇಖರಣೆ

ಈಗಾಗಲೇ ಸೈನುಸೈಟಿಸ್ ಹಾಗೂ ಅಸ್ತಮಾ ಸಮಸ್ಯೆ ಇರುವವರಿಗೆ ಇದರಿಂದ ಗಂಭೀರ ಸಮಸ್ಯೆಗಳಾಗುತ್ತಿವೆ. ಶ್ವಾಸಕೋಶದಲ್ಲಿ ಧೂಳು ಶೇಖರಣೆಯಾಗಿ ನಾನಾ ಬಗೆಯ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ, ಇದ್ಯಾವುದರ ಪರಿವೆಯೇ ಇಲ್ಲದೇ ಆಡಳಿತ ಯಂತ್ರ ಮೌನವಾಗಿದೆ. ಉತ್ತಮ ಆರೋಗ್ಯ ಜನರ ಹಕ್ಕಾಗಿದೆ. ಆದರೆ, ಅದನ್ನೇ ಆಡಳಿತ ಯಂತ್ರ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ.

 ಮೂರು ಬಗೆಯ ಧೂಳು

ಮೂರು ಬಗೆಯ ಧೂಳು

ಧೂಳಿನಲ್ಲಿ ಪ್ರಮುಖವಾಗಿ ಮೂರು ಭಾಗಗಳಿದ್ದು, ಕಾರ್ಖಾನೆ, ಭೂಮಿ ಅಗೆದಾಗ ಹಾಗೂ ಸಿಮೆಂಟ್ ಇತ್ಯಾದಿ ಕಾಮಗಾರಿಗಳಿಂದಾಗಿಯೂ ಧೂಳು ವಾತಾವರಣದಲ್ಲಿ ಮಿಶ್ರಣವಾಗುತ್ತದೆ. ಶಿವಮೊಗ್ಗ ನಗರದಲ್ಲಿ ಪ್ರಸ್ತುತ ಸಿಮೆಂಟ್ ಮತ್ತು ಭೂಮಿ ಅಗೆಯುವುದರಿಂದ ಉಂಟಾಗುವ ಧೂಳಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಲ್ಲಿ ಸಿಮೆಂಟ್, ಜಲ್ಲಿ ಇತ್ಯಾದಿಗಳ ಧೂಳು ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.

ಭೂಮಿ ಅಗೆದಾಗ ಅದರಿಂದ ಹಾರುವ ಧೂಳಿನಿಂದ ಆ ಕ್ಷಣಕ್ಕೆ ಶೀತ, ಸೀನು, ಕೆಮ್ಮು, ಪಿತ್ತ ಶೇಖರಣೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಶಿವಮೊಗ್ಗದಲ್ಲಿ ಕಾಮಗಾರಿಗಳಿಂದಾಗಿ ಸಿಮೆಂಟ್ ಮತ್ತು ಮಣ್ಣಿನ ಧೂಳಿನಲ್ಲಿ ಹೆಚ್ಚಳವಾಗಿದೆ. ಹೀಗಾಗಿ, ಸಂಬಂಧಪಟ್ಟವರು ಇದರೆಡೆಗೆ ಗಮನಹರಿಸಬೇಕು. ಇಲ್ಲದಿದ್ದರೆ, ಜನರ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮಗಳಾಗುವ ಸಾಧ್ಯತೆಯೂ ಇದೆ.

 ಸೈನುಸೈಟಿಸ್, ಅಸ್ತಮಾ ಇದ್ದವರು ಹುಷಾರ್

ಸೈನುಸೈಟಿಸ್, ಅಸ್ತಮಾ ಇದ್ದವರು ಹುಷಾರ್

ಈಗಾಗಲೇ ಸೈನುಸೈಟಿಸ್, ಅಸ್ತಮಾ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿದ್ದವರು ಧೂಳಿನಿಂದ ಜಾಗೃತೆ ವಹಿಸಲೇಬೇಕಿದೆ. ಇಲ್ಲದಿದ್ದರೆ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಯೂ ಇದೆ.

"ಸೈನುಸೈಟಿಸ್ ತೊಂದರೆ ಇರುವವರಿಗೆ ವರ್ಷಕ್ಕೊಮ್ಮೆ ಉಸಿರಾಟ ಸಂಬಂಧ ಸಮಸ್ಯೆ ಉಲ್ಬಣವಾಗುತ್ತದೆ. ಆದರೆ, ಇಂತಹ ಧೂಳು ಸೇವನೆಯಿಂದ ಈ ಸಮಸ್ಯೆ ಪದೇ ಪದೆ ಉಂಟಾಗುವ ಸಾಧ್ಯತೆಯೂ ಇದೆ. ಜೊತೆಗೆ, ಉಸಿರಾಟ ತೊಂದರೆ, ವಿಂಡ್ ಪೈಪ್‌ನಲ್ಲಿ ಸಮಸ್ಯೆಗಳು ಉಲ್ಬಣಿಸಬಹುದು. ಅದಕ್ಕಾಗಿ, ಈಗಾಗಲೇ ಸಮಸ್ಯೆಗಳಿರುವವರು ಸಾಧ್ಯವಾದಷ್ಟು ಧೂಳಿನಿಂದ ದೂರವಿರಬೇಕು. ಕಡ್ಡಾಯವಾಗಿ ಮಾಸ್ಕ್ ಧದರಿಸಬೇಕು," ಎನ್ನುವುದು ತಜ್ಞ ವೈದ್ಯರ ಸಲಹೆ.

 ಶ್ವಾಸಕೋಶದಲ್ಲಿ ಈಗಾಗಲೇ ಗಾಯ

ಶ್ವಾಸಕೋಶದಲ್ಲಿ ಈಗಾಗಲೇ ಗಾಯ

"ಕೋವಿಡ್‌ನಿಂದ ಗುಣಮುಖರಾಗಿ 6 ತಿಂಗಳಿಂದ 1 ವರ್ಷವಾದಲ್ಲಿ ಅಂತಹವರ ಶ್ವಾಸಕೋಶದಲ್ಲಿ ಈಗಾಗಲೇ ಕೆಲವು ಗಾಯಗಳಾಗಿರುತ್ತವೆ. ಒಂದುವೇಳೆ, ನಿತ್ಯ ಧೂಳು ಮಿಶ್ರಿತ ಗಾಳಿ ಉಸಿರಾಡಿದ್ದಲ್ಲಿ ಅವರಿಗೆ ಹೆಚ್ಚಿನ ತೊಂದರೆ ಕಟ್ಟಿಟ್ಟ ಬುತ್ತಿ".

"ಸೈನುಸೈಟಿಸ್, ಅಸ್ತಮಾ, ಕೋವಿಡ್‌ನಿಂದ ಗುಣಮುಖರಾದವರು ಧೂಳಿನಿಂದ ದೂರವಿರಬೇಕು. ಇಲ್ಲದಿದ್ದದರೆ ಆರೋಗ್ಯದಲ್ಲಿ ಸಾಕಷ್ಟು ತೊಂದರೆಗಳಾಗುವ ಸಾಧ್ಯತೆ ಇದೆ. ಮಾಸ್ಕ್ ಧಾರಣೆ, ಬೈಕ್‌ನಲ್ಲಿ ಹೋಗಬೇಕಾದರೆ ಪೂರ್ಣ ಹೆಲ್ಮೆಟ್ ಧರಿಸಿ ಗ್ಲಾಸ್ ಹಾಕಿಕೊಳ್ಳಬೇಕು," ಎಂದು ಇಎನ್‌ಟಿ ಸರ್ಜನ್ ಡಾ.ಎಂ.ವಿ. ವಿನಯ್ ಹೇಳಿದ್ದಾರೆ.

 ನೀರು ಸಿಂಪಡಣೆ ಮಾಡುತ್ತಿಲ್ಲ

ನೀರು ಸಿಂಪಡಣೆ ಮಾಡುತ್ತಿಲ್ಲ

"ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಆಗಾಗ ನೀರು ಸಿಂಪಡಣೆ ಮಾಡಿದರೆ ಧೂಳು ಏಳುವುದು ಕಡಿಮೆಯಾಗಲಿದೆ. ಆದರೆ ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳಾಗಲಿ, ಗುತ್ತಿಗೆದಾರರಾಗಲಿ ಈ ಬಗ್ಗೆ ಕ್ಯಾರೆ ಅನ್ನುತ್ತಿಲ್ಲ. ಇದೇ ಕಾರಣಕ್ಕೆ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ".

"ಸಾರ್ವಜನಿಕರು ಧೂಳಿನಿಂದ ದೂರವಿರುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ತಾವು ಮುತುವರ್ಜಿ ವಹಿಸಬೇಕು. ಜೊತೆಗೆ, ಮಹಾನಗರ ಪಾಲಿಕೆಯಿಂದ ಎಲ್ಲೆಲ್ಲಿ ಕಾಮಗಾರಿ ನಡೆಯುತ್ತಿದೆಯೋ ಅಂತಹ ಸ್ಥಳಗಳಲ್ಲಿ, ಜನದಟ್ಟಣೆ ಹೆಚ್ಚಿರುವ ಸ್ಥಳದಲ್ಲಿ ನೀರು ಸಿಂಪಡಣೆ ಮಾಡಬೇಕು. ಇದರಿಂದ ಧೂಳು ಹಾರುವುದನ್ನು ತಡೆಗಟ್ಟಬಹುದಾಗಿದೆ," ಎಂದು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನ್ಸಲ್ಟೆಂಟ್ ಫಿಜಿಶಿಯನ್ ಡಾ. ಶೂನ್ಯಸಂಪದ ತಿಳಿಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಶಿವಮೊಗ್ಗ ನಗರ ಮತ್ತಷ್ಟು ಅಂದಗೊಳ್ಳಲಿದೆ ಎಂದು ಜನರು ಭಾವಿಸಿದ್ದರು. ಆದರೆ ಧೂಳು, ಗುಂಡಿಗಳಿಂದಾಗಿ ಜನರ ಆರೋಗ್ಯ ಹದಗೆಡುತ್ತಿದ್ದು, ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.

English summary
Various works are being carried out in the Shivamogga Mahanagara palike area under the Smart City Plan, and the effect is dust everywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X