ಬರ ಪರಿಹಾರ; ಫ್ರೂಟ್ಸ್ ತಂತ್ರಾಂಶದಲ್ಲಿ ವಿವರ ಸೇರ್ಪಡೆ ಕಡ್ಡಾಯ
ಶಿವಮೊಗ್ಗ, ನವೆಂಬರ್ 28; ಶಿವಮೊಗ್ಗ ಜಿಲ್ಲೆಯ ರೈತರಿಗೆ ಜಿಲ್ಲಾಡಳಿತ ಕರೆಯೊಂದನ್ನು ನೀಡಿದೆ. ರೈತರು ಬರ ಪರಿಹಾರ, ಬೆಳೆವಿಮೆ, ಬೆಂಬಲ ಬೆಲೆ ಯೋಜನೆ ಹಾಗೂ ಇನ್ನಿತರೆ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ನೋಂದಣಿ ಹೊಂದಿರುವುದು ಕಡ್ಡಾಯವಾಗಿದೆ.
ರೈತರು ಜಮೀನಿನ ಎಲ್ಲಾ ದಾಖಲಾತಿಗಳನ್ನು ಈ ತಂತ್ರಾಂಶದಲ್ಲಿ ದಾಖಲು ಮಾಡುವಂತೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ. ಆರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,11,258 ಕೃಷಿ ಯೋಗ್ಯ ತಾಕುಗಳಿದ್ದು (ಸರ್ವೇ ನಂ/ ಪೋಡು) ಅವುಗಳಲ್ಲಿ ಈಗಾಗಲೇ 3,28,807 ತಾಕುಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದೆ. 1,90,749 ತಾಕುಗಳ ನೋಂದಣಿ ಬಾಕಿ ಇರುತ್ತದೆ.

ಬರಪೀಡಿತ ತಾಲೂಕುಗಳ ಘೋಷಣೆ; ಕರ್ನಾಟಕ ಸರ್ಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಹೊಸನಗರ, ಶಿಕಾರಿಪುರ ಹಾಗೂ ಸೊರಬ ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಣೆ ಮಾಡಿದೆ. ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರುವ ಒಟ್ಟು ವಿಸ್ತೀರ್ಣ ಮತ್ತು ಬೆಳೆ ಸಮೀಕ್ಷೆ ದತ್ತಾಂಶದ ಆಧಾರದ ಮೇಲೆ ಬೆಳೆ ನಷ್ಟ ಪರಿಹಾರ ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ.
ಆದ್ದರಿಂದ ಎಲ್ಲ ರೈತರು ತಾವು ಹೊಂದಿರುವ ಜಮೀನಿನ ಎಲ್ಲಾ ಸರ್ವೇ ನಂಬರ್‌ಗಳನ್ನು ಈ ತಂತ್ರಾಂಶದಲ್ಲಿ ದಾಖಲು ಮಾಡುವಂತೆ ಮನವಿ ಮಾಡಲಾಗಿದೆ. ಜಿಲ್ಲೆಯಾದ್ಯಂತ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ರೈತರು ತಾವು ಹೊಂದಿರುವ ಜಮೀನಿನ ಎಲ್ಲಾ ಪಹಣಿಗಳು, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್ ಪುಸ್ತಕಗಳೊಂದಿಗೆ ಕೃಷಿ ಇಲಾಖೆ (ಹೋಬಳಿ ರೈತ ಸಂಪರ್ಕ ಕೇಂದ್ರ), ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು.
ಜಿಲ್ಲೆಯಲ್ಲಿ ಇನ್ನೂ ಶಿವಮೊಗ್ಗ ತಾಲ್ಲೂಕಿನಲ್ಲಿ 34,000, ಭದ್ರಾವತಿ 35,791, ತೀರ್ಥಹಳ್ಳಿ 25,713, ಸಾಗರ 30,913, ಹೊಸನಗರ 11,651, ಶಿಕಾರಿಪುರ 26,551 ಮತ್ತು ಸೊರಬ 26,130 ಜಮೀನುಗಳ ಮಾಹಿತಿ ಫ್ರೂಟ್ಸ್ ತಂತ್ರಾಶದಲ್ಲಿ ಸೇರ್ಪಡೆಯಾಗುವುದು ಬಾಕಿ ಇದೆ.
ರೈತ ಬಾಂಧವರು ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ವಿವರಗಳನ್ನು ಈ ಕೂಡಲೇ ಜೋಡಣೆ ಮಾಡಲು ತಮ್ಮ ಗ್ರಾಮದ ಆಡಳಿತಾಧಿಕಾರಿಗಳು, ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು.
ಸಹಾಯಕ ಕೃಷಿ ನಿರ್ದೇಶಕರಾದ ರಮೇಶ್ ಎಸ್. ಟಿ. ಈ ಕುರಿತು ರೈತರಲ್ಲಿ ಮನವಿ ಮಾಡಿದ್ದಾರೆ. 2023-24 ನೇ ಸಾಲಿನಲ್ಲಿ ಮುಂಗಾರು ಮಳೆ ಕೊರತೆಯಿಂದ ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ವಿವಿಧ ಕೃಷಿ ಹಾಗೂ ಇತರೆ ಬೆಳೆಗಳು ಹಾನಿಯಾಗಿರುವ ಕಾರಣ, ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಪರಿಹಾರ ಪಡೆಯಲು ರೈತರು ತಮ್ಮ ಎಲ್ಲ ಪಹಣಿಗಳನ್ನು FRUITS ತಂತ್ರಾಂಶಕ್ಕೆ ನೋಂದಾಯಿಸಿ Farmer ID ಪಡೆಯಬೇಕಾಗಿರುತ್ತದೆ. ಇದಲ್ಲದೆ FID ಯು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ, PMKISAN ಯೋಜನೆಗಳಿಗೂ ಹಾಗೂ ಕೃಷಿ, ತೋಟಗಾರಿಕೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳಲ್ಲಿ ರೈತರು ಸೌಲಭ್ಯಗಳನ್ನು ಪಡೆಯಲು ಅತ್ಯವಶ್ಯಕವಾಗಿರುತ್ತದೆ.
ರೈತರು ತಕ್ಷಣವೇ ಈ ತಂತ್ರಾಂಶದಲ್ಲಿ ಸೇರ್ಪಡೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಹೊಸದಾಗಿ FID ಮಾಡಿಸಿಕೊಳ್ಳಲು ಹಾಗೂ ಪಹಣಿಗಳನ್ನು ಸೇರ್ಪಡೆ ಮಾಡಿಸಿಕೊಳ್ಳಲು ರೈತರು ತಮ್ಮ ಎಲ್ಲಾ ಪಹಣಿಗಳು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತೋಟಗಾರಿಕೆ ಹಾಗೂ ಗ್ರಾಮ ಆಡಳಿತಾಧಿಕಾರಿ ಕಚೇರಿಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications