ಶಿವಮೊಗ್ಗದ 3 ಠಾಣೆಯ ವ್ಯಾಪ್ತಿಯಲ್ಲಿ ಕರ್ಫ್ಯೂ ಮುಂದುವರಿಕೆ
ಶಿವಮೊಗ್ಗ, ಡಿಸೆಂಬರ್ 4: ಶಿವಮೊಗ್ಗ ನಗರದಲ್ಲಿ 2 ಗುಂಪಿನ ಮಧ್ಯೆ ನಡೆದ ಕೋಮುಗಲಭೆ ಘಟನೆ ಹಿನ್ನೆಲೆಯಲ್ಲಿ ಶುಕ್ರವಾರವೂ ಸಹ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಡೀ ದಿನ ಕರ್ಫ್ಯೂ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ, ಶುಕ್ರವಾರ ಕೂಡ 3 ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ನಾಳೆ ಶನಿವಾರ ಬೆಳಿಗ್ಗೆ 10 ಗಂಟೆವರೆಗೂ ಕರ್ಫ್ಯೂ ಮುಂದುವರೆಯಲಿದೆ ಎಂದರು.
ಕೋಟೆ ಠಾಣೆ, ದೊಡ್ಡಪೇಟೆ ಮತ್ತು ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ಶನಿವಾರದವರೆಗೂ ನಿಷೇಧಾಜ್ಞೆ ಮುಂದುವರೆಯಲಿದೆ ಎಂದು ಹೇಳಿದರು.

ಶಿವಮೊಗ್ಗ ನಗರದಲ್ಲಿ ಗುರುವಾರ ನಡೆದ ಕೋಮುಗಲಭೆಗೆ ಸಂಬಂಧ ಪಟ್ಟಂತೆ ನಡೆದಿರುವ ಅಹಿತಕರ ಘಟನೆ ಕುರಿತು ಎಲ್ಲಾ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಮೊದಲು ನಗರವನ್ನು ಶಾಂತಿಯುತವಾಗಿರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಘಟನೆ ಆದ ನಂತರ ಯೋಚನೆ ಮಾಡುವುದಕ್ಕಿಂತ, ಘಟನೆಗೂ ಮುನ್ನ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಗರದೆಲ್ಲೆಡೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದರು.
ಕೋಮುಗಲಭೆ ನಿಯಂತ್ರಿಸಲು ಪೊಲೀಸ್ ಇಲಾಖೆಯೊಂದಿಗೆ ಜಿಲ್ಲಾಡಳಿತ ಸಹಕಾರ ನೀಡುತ್ತಿದ್ದು, 10 ಸ್ಪೆಷಲ್ ಮ್ಯಾಜಿಸ್ಟ್ರೇಟ್ ನಿಯೋಜಿಸಲಾಗಿದ್ದು, ಶಾಂತಿ ನೆಲೆಸಲು ಕ್ರಮ ಜರುಗಿಸಲಾಗಿದೆ. ಮುಂಜಾಗ್ರತಾ ಕ್ರಮಕ್ಕೆ ಇಂದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ ಎಂದರು.
ಆಸ್ಪತ್ರೆಗಳ ಬಳಿ ಇರುವ ಹೋಟೆಲ್, ಹಾಲು ಉತ್ಪನ್ನ ಮಾರಾಟಕ್ಕೂ ನಿಷೇಧಾಜ್ಞೆ ಅಡ್ಡ ಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಅವಶ್ಯಕತೆ ಇರುವ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.












Click it and Unblock the Notifications