ಶಿವಮೊಗ್ಗ; ಹಳ್ಳಿಗಳಿಗೆ ಕೊರೊನಾ, ತಡವಾಗಿ ಎಚ್ಚೆತ್ತ ಜಿಲ್ಲಾಡಳಿತ
ಶಿವಮೊಗ್ಗ, ಮೇ 27; ಕೋವಿಡ್ 2ನೇ ಅಲೆ ಹರಡುವ ಪ್ರಮಾಣ ನಿಧಾನವಾಗಿ ತಗ್ಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಶೇ 40 ರಿಂದ ಶೇ 30ಕ್ಕೆ ಇಳಿಕೆಯಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಆತಂಕ ಮೂಡಿಸಿದೆ. ಇದೆ ಕಾರಣಕ್ಕೆ ಹಲವು ಊರುಗಳು ಲಾಕ್‌ಡೌನ್ ಆಗಿವೆ. ಕೆಲವು ಕಡೆ ಸೀಲ್ ಡೌನ್ ಕೂಡ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೇ ಅಲೆ ಕೊರೊನಾ ವ್ಯಾಪಕವಾಗಿ ಹರಡಿದೆ. ಏಪ್ರಿಲ್ 1 ರಿಂದ ಈತನಕ 20,591 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 11,270 ಮಂದಿ ಗ್ರಾಮೀಣ ಭಾಗದವರಾಗಿದ್ದಾರೆ. ಹಳ್ಳಿ ವ್ಯಾಪ್ತಿಯಲ್ಲಿ ಸೋಂಕು ವೇಗವಾಗಿ ಹರಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಶಿವಮೊಗ್ಗ ತಾಲೂಕಿನಲ್ಲಿ ಈತನಕ 5651 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ಪೈಕಿ 1430 ಸೋಂಕಿತರು ಗ್ರಾಮೀಣ ಭಾಗದವರು. ಭದ್ರಾವತಿಯಲ್ಲಿ 3307 ಮಂದಿಗೆ ಸೋಂಕು ತಗುಲಿದ್ದು, 1124 ಮಂದಿ ಗ್ರಾಮೀಣ ಭಾಗದವರು.
ಮೇ 26ರ ವರದಿಯಂತೆ ಶಿವಮೊಗ್ಗ ಜಿಲ್ಲೆಯಲ್ಲಿ 839 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 48612. ಸಕ್ರಿಯ ಪ್ರಕರಣಗಳ ಸಂಖ್ಯೆ 6990.

ಹಳ್ಳಿ ಹಳ್ಳಿಗಳೇ ಸೀಲ್ ಡೌನ್
ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹಳ್ಳಿಗಳೇ ಪ್ರಮುಖ ಟಾರ್ಗೆಟ್ ಆಗಿದೆ. ಇದೆ ಕಾರಣಕ್ಕೆ ಅತಿ ಹೆಚ್ಚು ಸೋಂಕಿತರು ಇರುವ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಕೆಲವು ಕಡೆ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ. ನಾರಾಯಣಪುರ, ಆನಂದಪುರ, ರಿಪ್ಪನ್ ಪೇಟೆ, ಕೋಣಂದೂರು, ಆನವಟ್ಟಿ ಸೇರಿದಂತೆ ಹಲವು ಕಡೆ ಗ್ರಾಮಗಳು ಲಾಕ್ ಡೌನ್ ಆಗಿವೆ.

ತಡವಾಗಿ ಎಚ್ಚೆತ್ತ ಆಡಳಿತ
ಮೊದಲ ಅಲೆಯಲ್ಲಿ ಇದ್ದಂತೆ ಈ ಭಾರಿಯೂ ಸೋಂಕು ನಗರ ಪ್ರದೇಶಗಳಿಗೆ ಸೀಮಿತ ಎಂದು ಜಿಲ್ಲಾಡಳಿತ ಅಂದಾಜಿಸಿತ್ತು. ಇದೆ ಕಾರಣಕ್ಕೆ ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಮತ್ತು ಆರೈಕೆಗಾಗಿ ಕೋವಿಡ್ ಕೇರ್ ಸೆಂಟರ್‌ಗಳನ್ನು ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ಥಾಪಿಸಿತ್ತು. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳ ಲೆಕ್ಕಾಚಾರ ಉಲ್ಟಾ ಮಾಡಿದ ಸೋಂಕು ಹಳ್ಳಿ ಹಳ್ಳಿ ತಲುಪಿದೆ. ಈಗ ಎಚ್ಚೆತ್ತಿರುವ ಆಡಳಿತ ಗ್ರಾಮೀಣ ಭಾಗದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಸೂಚಿಸಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಸೆಂಟರ್
"ಅಗತ್ಯಬಿದ್ದರೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವಂತೆ ಅಧಿಕಾರಿಗಳಿಗೆ, ಪಿಡಿಓಗಳಿಗೆ ಸೂಚಿಸಿದ್ದೇನೆ. ಕೆಲವು ಕಡೆ ಎರಡ್ಮೂರು ಗ್ರಾಮ ಪಂಚಾಯಿತಿಯವರು ಸೇರಿ ಕೋವಿಡ್ ಕೇರ್ ಸೆಂಟರ್ ಮಾಡುತ್ತೇವೆ ಅಂದಿದ್ದಾರೆ. ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ" ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಿಎಂ
ಹಳ್ಳಿಗಳೇ ಕೊರೊನಾ ಹಾಟ್ ಸ್ಪಾಟ್ ಆಗುತ್ತಿರುವ ಬೆನ್ನಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತವರು ಜಿಲ್ಲೆಯ ಸಚಿವರು, ಅಧಿಕಾರಿಗಳು, ಆಯ್ದ ಹತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಓಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಕಟ್ಟಿಹಾಕಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ.
ಮಳೆಗಾಲ ಆರಂಭವಾಗುತ್ತಿದ್ದು ಮಲೆನಾಡು ಭಾಗದಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆಯಲಿದೆ. ಈ ಹೊತ್ತಿಗೆ ಸೋಂಕು ಅಬ್ಬರಿಸಿದರೆ ಕೃಷಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಾಗಾಗಿ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಇದೆ.












Click it and Unblock the Notifications