ವೀಡಿಯೋ ವೈರಲ್: ಅರಣ್ಯಾಧಿಕಾರಿಗೆ ಆವಾಜ್ ಹಾಕಿದ ಕಾಂಗ್ರೆಸ್ ಶಾಸಕ
ಶಿವಮೊಗ್ಗ, ಜನವರಿ 06: ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ದೇವಸ್ಥಾನವನ್ನು ಕಟ್ಟಲು ಅರಣ್ಯಾಧಿಕಾರಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್ ಅರಣ್ಯಾಧಿಕಾರಿಗೆ ಧಮ್ಕಿ ಹಾಕಿದ್ದಾರೆ ಎಂಬ ದೂರು ಕೇಳಿಬಂದಿದೆ.
ಹೌದು, ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ದೇವಾಲಯ ಕಟ್ಟಲು ಅರಣ್ಯಾಧಿಕಾರಿ ದಿನೇಶ್ ವಿರೋಧಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರು ಕೊಟ್ಟ ಹಿನ್ನೆಲೆಯಲ್ಲಿ ಸಂಗಮೇಶ್ ಅವರು ಅರಣ್ಯಾಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಸಹ ಹಾಕಿದ್ದಾರೆ ಎನ್ನಲಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
"ದೇವಾಲಯ ಕಟ್ಟಲು ವಿರೋಧಿಸಿದ್ರೆ ಅರಣ್ಯಾಧಿಕಾರಿಗಳ ಕೈ- ಕಾಲು ಕತ್ತರಿಸುತ್ತೇನೆ. ದೇವಾಲಯ ಕಟ್ಟುವುದನ್ನು ತಡೆಯಲು ಮುಂದಾಗಬಾರದು. ತಡೆಯಲು ಮುಂದಾದ್ರೆ ಪರಿಣಾಮ ಎದುರಿಸುತ್ತಾರೆ" ಎಂದು ಆಗ್ರಹ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ರೀತಿ ಶಾಸಕರು ಗ್ರಾಮಸ್ಥರ ಎದುರು ಅಧಿಕಾರಿಗೆ ಫೋನ್ ನಲ್ಲಿ ಅವಾಜ್ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಈ ಸಂಬಂಧ ಅರಣ್ಯಾಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗೆಯೇ ಪೊಲೀಸ್ ಠಾಣೆಯಲ್ಲಿ ಯಾವ ಪ್ರಕರಣ ಕೂಡ ದಾಖಲಾಗಿಲ್ಲ. ಆದರೆ ಈ ವಿಡಿಯೋ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದು, ವೈರಲ್ ವೀಡಿಯೋದ ಸತ್ಯಾಸತ್ಯತೆ ಮುಂದೆ ತಿಳಿಯಬೇಕಿದೆಯಷ್ಟೇ.












Click it and Unblock the Notifications