ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಕಾಂಪೌಂಡ್ ಧ್ವಂಸ, ಗಂಧದ ಮರಕ್ಕೆ ಕೊಡಲಿ
ಶಿವಮೊಗ್ಗ, ನವೆಂಬರ್, 01: ದೀಪಾವಳಿ ಹಬ್ಬದ ಸಾಲು ರಜೆಯ ಸಂದರ್ಭದಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕಾಂಪೌಂಡ್ ಅನ್ನು ಕೆಡವಲಾಗಿದೆ. ಅಲ್ಲದೇ ಅಲ್ಲಿದ್ದ ಸುಮಾರು 20 ಗಂಧದ ಮರಗಳನ್ನು ಕಡಿದು ಹಾಕಲಾಗಿದೆ.
ಈ ಸಂಬಂಧ ಪ್ರಾಂಶುಪಾಲರು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಹಿಂಭಾಗದ ಕಾಂಪೌಂಡ್ ಧ್ವಂಸ ಮಾಡಲಾಗಿದೆ. ಖಾಸಗಿ ಲೇಔಟ್‌ಗೆ ರಸ್ತೆ ನಿರ್ಮಿಸಿಕೊಳ್ಳಲು ಕಾಂಪೌಂಡ್ ಕೆಡವಿದ್ದಾರೆ ಎಂದು ಆರೋಪಿಸಲಾಗಿದೆ.
ದೀಪಾವಳಿ ಹಬ್ಬದ ವೇಳೆ ಸಾಲು ರಜೆ ಇದ್ದವು. ಕಾಲೇಜಿನಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳು ಇಲ್ಲದ ಸಂದರ್ಭದಲ್ಲಿ ಹಾಸ್ಟೆಲ್ ಹಿಂಭಾಗದ ಕಾಂಪೌಂಡ್ ಅನ್ನು ಕೆಡವಲಾಗಿದೆ. ಕಾಂಪೌಂಡ್ ಧ್ವಂಸಗೊಳಿಸಿದ್ದು, ಅದರ ಅವಶೇಷಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ಹಬ್ಬದ ಬಳಿಕ ಕಾಲೇಜು ಪುನಾರಂಭವಾದಾಗ ಘಟನೆ ಬೆಳಕಿಗೆ ಬಂದಿದೆ. ಕಾಂಪೌಂಡ್ ಕೆಡವಿರುವ ವಿಚಾರ ತಿಳಿಯುತ್ತಿದ್ದಂತೆ ಸಹ್ಯಾದ್ರಿ ಕಾಲೇಜು ಆಡಳಿತ ಮಂಡಳಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಿದೆ. ನಂತರ ಕುಲಸಚಿವೆ ಜಿ. ಅನುರಾಧ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸ್, ಅರಣ್ಯಾಧಿಕಾರಿಗಳಿಂದ ಪರಿಶೀಲನೆ; ಕಾಂಪೌಂಡ್ ಧ್ವಂಸಗೊಳಿಸುವುದಲ್ಲದೇ ಗಂಧದ ಮರಗಳನ್ನು ಕೂಡ ಕಡಿದು ಹಾಕಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸುವಂತೆ ಕುಲಸಚಿವೆ ಜಿ. ಅನುರಾಧ ಅವರು ಸೂಚನೆ ನೀಡಿದ್ದರು. ನಂತರ ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪೊಲೀಸರು ಅಗತ್ಯ ಮಾಹಿತಿ ಮತ್ತು ವಿಡಿಯೋ ದಾಖಲು ಮಾಡಿಕೊಂಡಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸಹ್ಯಾದ್ರಿ ಕಲಾ ಕಾಲೇಜು ಪ್ರಾಂಶುಪಾಲ ಡಾ. ಧನಂಜಯ ಅವರು, "ಕಿಡಿಗೇಡಿಗಳು ಸಹ್ಯಾದ್ರಿ ಕಾಲೇಜ ಕಾಂಪೌಂಡ್ ಒಡೆದಿದ್ದಾರೆ. ಎರಡು ಎಕರೆ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಗಂಧದ ಗಿಡವನ್ನು ಕಡಿದಿದ್ದಾರೆ. ಇದನ್ನು ಗಮನಿಸಿದಾಗ ದುರುದ್ದೇಶದಿಂದ ಮಾಡಲಾಗಿದೆ ಎನ್ನುವುದು ಗೊತ್ತಾಗುತ್ತದೆ. ಪಕ್ಕದ ಬಡಾವಣೆಗೆ ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ್ದಿದ್ದು, ಕೋಟೆ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದೇವೆ" ಎಂದರು.

ಕಾಲೇಜು ಎಸ್ಟೇಟ್ ಆಫೀಸರ್ ಡಾ. ಪ್ರಹ್ಲಾದ್ ಮಾತನಾಡಿ, "ಕಾಲೇಜು ಆಸ್ತಿಯನ್ನು ಕಬಳಿಸುವ ವ್ಯವಸ್ಥಿತ ಹುನ್ನಾರ ನಡೆಸಲಾಗಿದೆ. ದೀಪಾವಳಿ ಹಬ್ಬದ ಸಂದರ್ಭ ಕಾಲೇಜು ಮತ್ತು ಕುವೆಂಪು ವಿಶ್ವವಿದ್ಯಾಲಯ ಗಮನಕ್ಕೆ ತರದೆ ಜೆಸಿಬಿ ಬಳಸಿ ಹಾಸ್ಟೆಲ್ ಗೋಡೆಯನ್ನು ಕೆಡವಿದ್ದಾರೆ. ಹಾಗೂ 20ಕ್ಕೂ ಹೆಚ್ಚು ಗಂಧದ ಮರಗಳನ್ನು ಕಡಿದು ಹಾಕಿದ್ದಾರೆ" ಎಂದು ತಿಳಿಸಿದರು.
ಸಹ್ಯಾದ್ರಿ ಕಾಲೇಜಿಗಾಗಿ ವಿಶಾಲವಾದ ಜಾಗ ಮೀಸಲು ಇರಿಸಲಾಗಿದೆ. ಸುಮಾರು 100 ಎಕರೆ ಜಮೀನು ಕಾಲೇಜಿಗಾಗಿ ಮೀಸಲಾಗಿತ್ತು. ಆದರೆ ವಿವಿಧೆಡೆ ಒತ್ತುವರಿಯಾಗಿದ್ದು, 79 ಎಕರೆ ಭೂಮಿ ಮಾತ್ರ ಉಳಿದುಕೊಂಡಿದೆ.












Click it and Unblock the Notifications