ಅಂಬ್ಯುಲೆನ್ಸ್‌ನಲ್ಲಿ ಶಿವಮೊಗ್ಗಕ್ಕೆ ಬಂದವರ ಮೇಲೆ ಬಿತ್ತು ಕೇಸ್!
ಶಿವಮೊಗ್ಗ, ಏಪ್ರಿಲ್ 13 : ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರಲು ಅಂಬ್ಯುಲೆನ್ಸ್ ಬಳಕೆ ಮಾಡಿದ್ದ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಜಿಲ್ಲೆಯಲ್ಲಿ ಹಿಂದೆಯೂ ಇಂತಹ ಘಟನೆ ನಡೆದಿತ್ತು.
ಬೆಂಗಳೂರಿನ ಶ್ರೀನಗರದ ನಿವಾಸಿ ಕೆ. ಬಿ. ಮೋಹನ್ ಗೌಡ ಮತ್ತು ಇತರ ಮೂವರು ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. 12/4/2020 ರಂದು ಕೆ.ಬಿ. ಮೋಹನ್ ಗೌಡ ಅಂಬ್ಯುಲೆನ್ಸ್‌ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದ.
ತಮ್ಮ ವಾಹನದಲ್ಲಿ ಅನಧಿಕೃತವಾಗಿ ಶಿವಮೊಗ್ಗದ ಸೊರಬದ ಕಾನಕೇರಿಯ ಮೂವರು ನಿವಾಸಿಗಳನ್ನು ಕರೆದುಕೊಂಡು ಬಂದಿದ್ದ. ಬೆಂಗಳೂರಿನಿಂದ ಅವರನ್ನು ಕರೆದುಕೊಂಡ ಕಾರಣಕ್ಕೆ ಪ್ರಕರಣ ದಾಖಲು ಮಾಡಲಾಗಿದೆ.

ಕೊರೊನಾ ವೈರಸ್ ಇತರರಿಗೂ ಸಹಾ ಹರಡುವ ಸಾಧ್ಯತೆಗಳಿವೆ. ಆದ್ದರಿಂದ, ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಆದೇಶವನ್ನು ಉಲ್ಲಂಘನೆ ಮಾಡಿ ಶಿವಮೊಗ್ಗಕ್ಕೆ ಮೂವರನ್ನು ಕರೆತಂದ ಅಂಬ್ಯುಲೆನ್ಸ್ ಚಾಲಕನ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ವಾಹನ ವಶಕ್ಕೆ ಪಡೆಯಲಾಗಿದೆ.
ಈ ಹಿಂದೆ 25/3/2020 ರಂದು ಭದ್ರಾವತಿಯ ಸಯ್ಯದ್ ಖಾಸಿಂ ಎನ್ನುವವರು ತಮ್ಮ ಅಂಬ್ಯುಲೆನ್ಸ್‌ನಲ್ಲಿ ಶಿವಮೊಗ್ಗದ ಕಡೇಕಲ್ ಗ್ರಾಮದ ಐವರು ನಿವಾಸಿಗಳನ್ನು ಬೆಂಗಳೂರಿನಿಂದ ಕರೆ ತಂದಿದ್ದರು. ಇವರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ. ಆದರೆ, ಜಿಲ್ಲೆಯ ಗಡಿಗಳನ್ನು ಮುಚ್ಚಲಾಗಿದ್ದು, ಹೊರಗಿನಿಂದ ಬರುವವರ ಮೇಲೆ ಎಚ್ಚರ ವಹಿಸಲಾಗಿದೆ.











Click it and Unblock the Notifications