BPL Card: 15 ಬಜೆಟ್ ಮಂಡಿಸಿದ ಸಿಎಂಗೆ ಹಣ ಕ್ರೋಢೀಕರಿಸಲು ಆಗುತ್ತಿಲ್ಲ: ಬಿವೈ ವಿಜಯೇಂದ್ರ
ಬೆಂಗಳೂರು, ನವೆಂಬರ್ 18: ಕರ್ನಾಟಕದಲ್ಲಿ ವಕ್ಫ್ ವಿವಾದ ಬೆನ್ನಲ್ಲೆ ಬಡವರ ಬಿಪಿಎಲ್ ಕಾರ್ಡ್ ರದ್ದು ವಿಚಾರ ಭಾರೀ ಸುದ್ದು ಮಾಡುತ್ತಿದೆ. ರಾಜ್ಯದಲ್ಲಿ ಜಾರಿಗೆ ತಂದಿರುವ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೂಢೀಕರಿಸಲು ಸರ್ಕಾರ ಹೀಗೆ ಬಡವರ ಮೇಲೆ ಬರೆ ಎಳೆಯುತ್ತಿದೆ ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ದೂರಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಡವರ ಮೇಲೆ ಬರೆ ಎಳೆಯುವ ಕೆಲಸ ಆಗುತ್ತಿದೆ ಎಂದು ಬಿಪಿಎಲ್ ರೇಷನ್ ಕಾರ್ಡ್ ರದ್ದು ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಈವರೆಗೆ 15 ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಡೀಕರಿಸಲು ಆಗುತ್ತಿಲ್ಲ. ಹೀಗಾಗಿಯೇ ಇಂತಹ ಕೆಲಸಗಳಿಗೆ ಕೈ ಹಾಕಿದ್ದಾರೆ ಎಂದು ಆರೋಪಿಸಿದರು.

ಬಿಪಿಎಲ್ ಕಾರ್ಡ್ ರದ್ದು ಮೂಲಕ ಬಡವರ ಮೇಲೆ ಬರೆ ಎಳೆದು ಗದ ಪ್ರಹಾರ ಮಾಡುತ್ತಿದ್ದಾರೆ. ಒಂದು ಕಡೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣ ಇಲ್ಲ. ಬಿಪಿಎಲ್ ಕಾರ್ಡ್ ಕಟ್ ಮಾಡುತ್ತಿದ್ದು. ಗ್ಯಾರಂಟಿ ಗಳಿಗೆ ಹಣ ಕ್ರೋಢೀಕರಿಸಲು ಈ ರೀತಿಯ ವಿಚಾರಗಳಿಗೆ ಕೈ ಹಾಕುತ್ತಿದ್ದಾರೆ ಎಂದು ಅವರು ಪುನರುಚ್ಚರಿಸಿದರು.
ಕಾಂಗ್ರೆಸ್ ಶಾಸಕರಿಗೆ ದುಡ್ಡು ಕೊಟ್ಟು ಖರೀದಿ, ಆಪರೇಶನ್ ಕಮಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರವಿಗಾಣಿಗಾ ಏನ್ ಹೇಳಿದ್ದಾರೆ ಎನ್ನುವುದಕ್ಕಿಂತ ಸ್ವತಃ ಮುಖ್ಯಮಂತ್ರಿಗಳೆ ಜವಾಬ್ದಾರಿ ಸ್ಥಾನದಲ್ಲಿರುವರೇ ಶಾಸಕರನ್ನು ಖರೀದಿಸುತ್ತಿದ್ದಾರೆ ಎಂದಿದ್ದಾರೆ.
ಆಪರೇಷನ್ ಕಮಲ ಮೇಲೆ ಆಸಕ್ತಿ ಇಲ್ಲ
ನಾನು ಈ ಹಿಂದೆಯು ಹೇಳಿದ್ದೇನೆ ಬಿಜೆಪಿ ಆಪರೇಶನ್ ಮಾಡುತ್ತಿಲ್ಲ. ಕಾಂಗ್ರೆಸ್ ನಲ್ಲಿ ಅಸಮಾಧಾನ ಕುದಿಯುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಸಿದ್ದರಾಮಯ್ಯನವರು ಸಿಎಂ ಆಗಿರುವುದು ಸಾಕು, ನಾವು ಮುಖ್ಯಮಂತ್ರಿ ಆಗಬೇಕು ಎಂದಿರುವ ಕಾಂಗ್ರೆಸ್ ನಾಯಕರಲ್ಲಿ ಪೈಪೋಟಿ ಶುರುವಾಗಿದೆ.
ಆ ಪೈಪೋಟಿಯ ಪರಿಣಾಮವಾಗಿ ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ ನಡಿಯುತ್ತಿದೆ ಎಂದು ಬಿಜೆಪಿ ವಿರುದ್ಧ ಇಲ್ಲ ಸಲ್ಲದ ಆರೋಪ ಹೊರಿಸಿದ್ದಾರೆ. ಬಿಜೆಪಿಗೆ ಅದರ ಆಸಕ್ತಿ ಸಹ ಇಲ್ಲ. ಏಕೆಂದರೆ ಜನರು ನಮ್ಮನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ.
ವಿರೋಧ ಪಕ್ಷವಾಗಿ ನಾವು ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿರುಗೇಟು ನೀಡಿದ್ದಾರೆ.
ನ. 21ಕ್ಕೆ ಪ್ರತಿಭಟನೆ, ಬಳಿಕ ರಾಜ್ಯಾದ್ಯಂತ ಪ್ರವಾಸ: ಬಿವೈವಿ
ಈ ಸರ್ಕಾರ ಬಿಪಿಎಲ್ ಕಾರ್ಡ್ ಮಾತ್ರವಲ್ಲದೇ, ವಕ್ಫ ವಿಚಾರದಲ್ಲೂ ಬಡವರು, ಹಿಂದೂಗಳ ಭಾವನೆ ಕೆರಳಿಸುವಂತೆ ಮಾಡುತ್ತಿದೆ. ಮತ್ತೊಂದೆಡೆ ರೈತರ ಜಮೀನು ಕಿತ್ತುಕೊಳ್ಳಲು ಮುಂದಾಗಿದೆ. ಬಿಜೆಪಿ ಈ ವಿಚಾರವನ್ನು ಗಂಭೀರವಾಗಿ ತಗೆದುಕೊಂಡಿದೆ. ನವೆಂಬರ್ 21ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ. ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಮೂರು ತಂಡಗಳಲ್ಲಿ ಪ್ರವಾಸ ಮಾಡುತ್ತೇವೆ ಎಂದರು.
ಉಪಚುನಾವಣೆ ನೆಡೆದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. 23ಕ್ಕೆ ಚುನಾವಣೆ ಫಲಿತಾಂಶ ಘೋಷಣೆಯಾಗಲಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಸಂಡೂರು ಹಾಗೂ ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಭವಿಷ್ಯ ಹೇಳುತ್ತಿಲ್ಲ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ನಾನು ಆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಅಲ್ಲಿನ ಜನರ ಭಾವನೆ ಅರ್ಥಮಾಡಿಕೊಂಡು ಹೇಳುತ್ತಿದ್ದೇನೆ. ಮೂರು ಕ್ಷೇತ್ರಗಳಲ್ಲಿ ವಿಜಯಶಾಲಿ ಆಗುತ್ತೇವೆ.












Click it and Unblock the Notifications