ಹೊಂದಾಣಿಕೆ ರಾಜಕೀಯ; ಖಡಕ್ ಪ್ರತಿಕ್ರಿಯೆ ಕೊಟ್ಟ ವಿಜಯೇಂದ್ರ!
ಶಿವಮೊಗ್ಗ, ಮೇ 04; "ಬಿ. ಎಸ್. ಯಡಿಯೂರಪ್ಪ ಅವರಿಗಾಗಲಿ ಅವರ ಕುಟುಂಬಕ್ಕಾಗಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುವ ಪರಿಸ್ಥಿತಿ ಬಂದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ನಾನು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ" ಎಂದು ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಬಿ. ವೈ. ವಿಜಯೇಂದ್ರ ಹೇಳಿದರು.
ಗುರುವಾರ ಶಿವಮೊಗ್ಗ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಬಿ. ವೈ. ವಿಜಯೇಂದ್ರ, ಶಿಕಾರಿಪುರದಲ್ಲಿ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂಬ ವರದಿಗಳಿಗೆ ಖಡಕ್ ಉತ್ತರ ನೀಡಿದರು. "ಇಲ್ಲಿಯ ತನಕ ಶಿಕಾರಿಪುರ ಬಿ. ಎಸ್. ಯಡಿಯೂರಪ್ಪ ಕರ್ಮಭೂಮಿಯಾಗಿತ್ತು. ಇದು ನನ್ನ ಜನ್ಮಭೂಮಿ ಕೂಡಾ" ಎಂದರು.

"ಶಿಕಾರಿಪುರದ ಎಲ್ಲಾ ಬೂತ್‌ಗಳಿಗೆ ಈಗಾಗಲೇ 3 ಬಾರಿ ಭೇಟಿ ನೀಡಿ ಮತಯಾಚನೆ ಮಾಡಲಾಗಿದೆ. ಕಾರ್ಯಕರ್ತರು ಉತ್ಸಾಹದಲ್ಲಿ, ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಸಂಘಟನೆ ಇದೆ, ಗೆಲುವು ಸುಲಭವಾಗಿದೆ" ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಶಿಕಾರಿಪುರದಲ್ಲಿ ಗೆಲುವು; "2004ರ ಚುನಾವಣೆ ಸಂದರ್ಭದಲ್ಲಿ ಯಾರು ಅಭ್ಯರ್ಥಿ ಎಂಬುದೇ ಗೊತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಶಿಕಾರಿಪುರದ ಸ್ವಾಭಿಮಾನಿ ಮತದಾರರು 46 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಯಡಿಯೂರಪ್ಪ ಗೆಲ್ಲಿಸಿದ್ದಾರೆ. ನಾನು ಈ ಬಾರಿ 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ" ಎಂದರು.

"ಉಪ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಬಿ. ವೈ. ರಾಘವೇಂದ್ರ ಅಭ್ಯರ್ಥಿಯಾಗಿದ್ದರು. ಸಿದ್ದರಾಮಯ್ಯ ಸರ್ಕಾರ ಎಲ್ಲಾ ಕ್ಯಾಬಿನೆಟ್ ಜೊತೆಗೆ ಬಂದು ತಾಲೂಕಿನಲ್ಲಿ ಪ್ರಚಾರ ಮಾಡಿತು. ಹಣ, ಹೆಂಡದ ಹೊಳೆ ಹರಿಸಿದರೂ ಸಹ ಅದ್ಯಾವುದಕ್ಕೂ ಬೆಲೆ ಕೊಡದೆ ಜನರು ರಾಘವೇಂದ್ರಗೆ ಆಶೀರ್ವಾದ ಮಾಡಿದರು" ಎಂದು ಬಿ. ವೈ. ವಿಜಯೇಂದ್ರ ಹೇಳಿದರು.
"ಶಿಕಾರಿಪುರದಲ್ಲಿ ಹೊಂದಾಣಿಕೆ ರಾಜಕೀಯದ ಪ್ರಶ್ನೆಯೇ ಇಲ್ಲ. ಪಕ್ಷದ ಸಂಘಟನೆ, ಕಾರ್ಯಕರ್ತರ ಪರಿಶ್ರಮ, ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀ ರಕ್ಷೆ. ವಿಷಬೀಜ ಬಿತ್ತಿ, ಸಮಾಜ ಒಡೆಯುವ ಕೆಲಸ ನಡೆಯಲ್ಲ. ಬಂಜಾರರು ಬಿಜೆಪಿ ಪರವಾಗಿ ಇದ್ದಾರೆ" ಎಂದು ಬಿ. ವೈ. ವಿಜಯೇಂದ್ರ ತಿಳಿಸಿದರು.
ಹೊಂದಾಣಿಕೆ ರಾಜಕೀಯದ ಆರೋಪ; ಕಾಂಗ್ರೆಸ್ ಪಕ್ಷವು ಶಿಕಾರಿಪುರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡುವ ಮೊದಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದ ಮುಂದೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡು ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುತ್ತಿಲ್ಲ ಎಂದು ಆರೋಪಿಸಿದ್ದರು. ಪಕ್ಷ ಗೋಣಿ ಮಾಲತೇಶ್ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ಕ್ಷೇತ್ರದಲ್ಲಿಎಸ್. ಪಿ. ನಾಗರಾಜ ಗೌಡಗೆ ಟಿಕೆಟ್ ನೀಡಬೇಕು ಎಂಬುದು ಒತ್ತಾಯವಾಗಿತ್ತು. ಆದರೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಗೋಣಿ ಮಾಲತೇಶ್ ಕಣಕ್ಕಿಳಿಸಲಾಗಿದೆ. ಅವರು ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಕಾಂಗ್ರೆಸ್ ಬೇಕೆಂದೇ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿಲ್ಲ ಎಂದು ಆರೋಪಿಸಲಾಗಿತ್ತು.
ಇನ್ನು ಕಾಂಗ್ರೆಸ್ ಪಕ್ಷ ಗೋಣಿ ಮಾಲತೇಶ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬಳಿಕ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ರಾಜಕೀಯ ನಡೆದಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಸ್. ಪಿ. ನಾಗರಾಜ ಗೌಡ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಸಿದ್ದಾರೆ. ಈ ಬಂಡಾಯದಿಂದ ವಿಜಯೇಂದ್ರ ಗೆಲುವಿಗೆ ಸಹಕಾರ ಸಿಗಲಿದೆಯೇ? ಕಾದು ನೋಡಬೇಕಿದೆ.
ಶಿಕಾರಿಪುರ ಕ್ಷೇತ್ರದ ಹಾಲಿ ಶಾಸಕರು ಬಿ. ಎಸ್. ಯಡಿಯೂರಪ್ಪ. ಆದರೆ ಅವರು 2023-24ರ ಬಜೆಟ್ ಅಧಿವೇಶನದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣಾ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಣೆ ಮಾಡಿದ್ದರು. ಬಿಜೆಪಿ ಬಿ. ವೈ. ವಿಜಯೇಂದ್ರಗೆ ಶಿಕಾರಿಪುರದ ಟಿಕೆಟ್ ನೀಡಿದೆ.












Click it and Unblock the Notifications