Budget 2025: ಮಲೆನಾಡು-ಉತ್ತರ ಕರ್ನಾಟಕ ಬೆಸೆಯುವ ಹೊಸ ರೈಲು ಯೋಜನೆಗೆ ಒಪ್ಪಿಗೆ
ಶಿವಮೊಗ್ಗ, ಫೆಬ್ರವರಿ 01: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಬಜೆಟ್ ಸೇರಿಕೊಂಡಿದೆ. ಆದ್ದರಿಂದ ರೈಲ್ವೆ ಇಲಾಖೆಗೆ ನೀಡಿದ ಅನುದಾನ, ಹೊಸ ಹೊಸ ಯೋಜನೆಗಳ ವಿವರಗಳು ಈಗ ಲಭ್ಯವಾಗುತ್ತಿದೆ. ಬಜೆಟ್‌ನಲ್ಲಿ ಕರ್ನಾಟಕದ ಮಲೆನಾಡು ಭಾಗಕ್ಕೆ ಪ್ರಮುಖ ಕೊಡುಗೆಯೊಂದನ್ನು ನೀಡಲಾಗಿದೆ. ಮಲೆನಾಡು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ಹೊಸ ರೈಲು ಯೋಜನೆ ಘೋಷಣೆ ಮಾಡಲಾಗಿದೆ.
ಶನಿವಾರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಶಿವಮೊಗ್ಗ-ಉತ್ತರ ಕರ್ನಾಟಕದ ಜೊತೆ ಸಂಪರ್ಕಿಸುವ ಪ್ರಮುಖ ರೈಲು ಯೋಜನೆಗೆ ಒಪ್ಪಿಗೆ ನೀಡಿದ್ದಾರೆ. ಭದ್ರಾವತಿ ಮತ್ತು ಚಿಕ್ಕಜಾಜೂರು ನಡುವೆ ನೂತನ ರೈಲು ಮಾರ್ಗವನ್ನು ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ.

ಭದ್ರಾವತಿ ಶಿವಮೊಗ್ಗ ಜಿಲ್ಲೆಯಲ್ಲಿದೆ. ಚಿಕ್ಕಜಾಜೂರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿದೆ. ಈ ಹೊಸ ರೈಲು ಮಾರ್ಗ ಉತ್ತರ ಕರ್ನಾಟಕ ಭಾಗದ ಕಡೆಯ ರೈಲುಗಳು ಆಗಮಿಸುವ ಚಿಕ್ಕಜಾಜೂರು ಜಂಕ್ಷನ್‌ಗೆ ಮಲೆನಾಡನ್ನು ಸಂಪರ್ಕಿಸುತ್ತದೆ. ಬಜೆಟ್‌ನಲ್ಲಿ ಈ ಯೋಜನೆ ಘೋಷಣೆ ಮಾಡುವ ನಿರೀಕ್ಷೆ ಇತ್ತು.
ಇದಲ್ಲದೇ ಈಗಾಗಲೇ ಕಾಮಗಾರಿ ನಡೆಯುತ್ತಿರುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗಕ್ಕೆ 68 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಎರಡು ರೈಲು ಯೋಜನೆಗಳು ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಸೇರಿವೆ.
ಭದ್ರಾವತಿ-ಚಿಕ್ಕಜಾಜೂರು ರೈಲು ಮಾರ್ಗ: ಕೆಲವು ದಿನಗಳ ಹಿಂದೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, "ಚಿತ್ರದುರ್ಗ, ಕಲ್ಯಾಣ ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಭದ್ರಾವತಿ-ಚಿಕ್ಕಜಾಜೂರು ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ" ಎಂದು ಹೇಳಿದ್ದರು.
ಶನಿವಾರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಈ ನೂತನ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿದ್ದಾರೆ. ಮಾಹಿತಿಗಳ ಪ್ರಕಾರ ಭದ್ರಾವತಿ-ಚನ್ನಗಿರಿ ಮೂಲಕ ರೈಲು ಮಾರ್ಗ ಚಿಕ್ಕಜಾಜೂರು ಸಂಪರ್ಕಿಸಲಿದೆ. ಈ ಮಾರ್ಗದ ರಸ್ತೆ 71 ಕಿ. ಮೀ. ಇದೆ. ರೈಲು ಮಾರ್ಗ ನಿರ್ಮಾಣ ಮಾಡಿದರೆ 10 ಕಿ. ಮೀ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಸದ್ಯ ಶಿವಮೊಗ್ಗ-ಉತ್ತರ ಕರ್ನಾಟಕ ಸಂಪರ್ಕಿಸಲು, ಶಿವಮೊಗ್ಗ-ಚಿತ್ರದುರ್ಗ ಜಿಲ್ಲೆ ಸಂಪರ್ಕಿಸಲು ನೇರವಾದ ರೈಲು ಮಾರ್ಗವಿಲ್ಲ. ಭದ್ರಾವತಿ ಚಿಕ್ಕಜಾಜೂರು ರೈಲು ಮಾರ್ಗ ನಿರ್ಮಾಣವಾದರೆ ಚಿಕ್ಕಜಾಜೂರು ಮೂಲಕ ಮಲೆನಾಡಿನ ಜನರು ಉತ್ತರ ಕರ್ನಾಟಕದ ಕಡೆ ಸಾಗಬಹುದು. ಅಲ್ಲದೇ ಶಿವಮೊಗ್ಗ-ಚಿತ್ರದುರ್ಗ ನಡುವೆ ರೈಲು ಸಂಚಾರ ಸಾಧ್ಯವಾಗಲಿದೆ.
ಪ್ರಸ್ತಾವಿತ ನೂತನ ಭದ್ರಾವತಿ-ಚಿಕ್ಕಜಾಜೂರು ರೈಲು ಮಾರ್ಗದಿಂದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಇದ್ದು, ಇದಕ್ಕೆ ಬಳ್ಳಾರಿಯ ಸಂಡೂರಿನಲ್ಲಿ ಭೂಮಿ ಮಂಜೂರು ಮಾಡಲಾಗಿದೆ. ಆದ್ದರಿಂದ ಕಾರ್ಖನೆ ಆರಂಭವಾದರೆ ಅದಕ್ಕೆ ಕಬ್ಬಿಣದ ಅದಿರು ಸಾಗಣೆ ಮಾಡಲು ಅನುಕೂಲವಾಗಲಿದೆ.
ಈ ರೈಲು ಮಾರ್ಗ ಯಾವ ಯಾವ ಪ್ರದೇಶದ ಮೂಲಕ ಹಾದು ಹೋಗಲಿದೆ, ಯೋಜನಾ ವೆಚ್ಚ ಎಷ್ಟು?, ಪೂರ್ಣಗೊಳಿಸಲು ನೀಡಿರುವ ಗುರಿ ಏನು? ಎಂಬ ವಿವರ ಇನ್ನೂ ತಿಳಿದುಬಂದಿಲ್ಲ.












Click it and Unblock the Notifications