ಶಿವಮೊಗ್ಗ; ಶಿರಾಳಕೊಪ್ಪದಲ್ಲಿ ಸಂತೆ ಬಳಿ ನಿಗೂಢ ಸ್ಫೋಟ
ಶಿವಮೊಗ್ಗ, ಫೆಬ್ರವರಿ 18; ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪಳದಲ್ಲಿ ಸಂತೆಯ ಬಳಿ ನಿಗೂಢ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಶಿಕಾರಿಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಭಾನುವಾರ ಸಂತೆ ನಡೆಯುತ್ತಿದ್ದ ಪ್ರದೇಶದಿಂದ ತುಸು ದೂರದ ಅಂಗಡಿಯಲ್ಲಿ ಬ್ಯಾಗ್‌ನಲ್ಲಿ ಸ್ಫೋಟ ಸಂಭವಿಸಿದೆ. ಶಿರಾಳಕೊಪ್ಪ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.

ದಂಪತಿಗಳು ಬ್ಯಾಗ್ ಅನ್ನು ಪರಿಚಯಸ್ಥರ ಅಂಗಡಿಯಲ್ಲಿಟ್ಟು ಸಂತೆಗೆ ಹೋಗಿದ್ದರು. ಅವರು ಆ ಕಡೆ ಹೋದ ಕೆಲವೇ ಕ್ಷಣಗಳಲ್ಲಿ ಬ್ಯಾಗ್‌ನಲ್ಲಿದ್ದ ವಸ್ತು ಸ್ಫೋಟಗೊಂಡಿದೆ. ಇಬ್ಬರಿಗೆ ಈ ಘಟನೆಯಲ್ಲಿ ಚಿಕ್ಕಪುಟ್ಟ ಗಾಯಗಳಾಗಿವೆ.
ಸ್ಪಷ್ಟನೆ ನೀಡಿದ ಎಸ್ಪಿ: ಶಿರಾಳಕೊಪ್ಪದಲ್ಲಿ ನಡೆದ ಸ್ಫೋಟದ ಬಗ್ಗೆ ಶಿವಮೊಗ್ಗ ಎಸ್ಪಿ ಜಿ. ಕೆ. ಮಿಥುನ್ ಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ. ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ವಾಟ್ಸಪ್ ಮೂಲಕ ಈ ಕುರಿತು ಸಂದೇಶ ಕಳಿಸಿರುವ ಅವರು, ಬಸ್ ನಿಲ್ದಾಣದ ಸಮೀಪ ಸಂಭವಿಸಿದ ಸ್ಫೋಟಕ್ಕೆ ಹಂದಿಗೆ ಇಡಲು ತಂದಿದ್ದ ಸಿಡಿಮದ್ದು ಕಾರಣ ಎಂದು ತಿಳಿಸಿದ್ದಾರೆ.
ಶಿರಾಳಕೊಪ್ಪ ಸಂತೆಗೆ ಆಗಮಿಸಿದ್ದ ಉಮೇಶ್ ಮತ್ತು ರೂಪ ದಂಪತಿಗಳು ಬೆಡ್ ಶೀಟ್ ಶೀಟ್ ಖರೀದಿ ಮಾಡಿದ್ದರು. ಅಂಗಡಿ ಮಾಲೀಕ ಪರಿಚಯವಿದ್ದ ಕಾರಣ ಬ್ಯಾಗ್ ಅಲ್ಲೇ ಇಟ್ಟು ಬೇರೆ ಅಂಗಡಿಗೆ ಖರೀದಿಗೆ ಹೋಗಿದ್ದರು.
ಕೆಲವೇ ಕ್ಷಣಗಳಲ್ಲಿ ಬ್ಯಾಗ್ ಸ್ಫೋಟಗೊಂಡಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಕಾಡು ಹಂದಿಗೆ ಇಡಲು ತಂದಿದ್ದ ಸಿಡಿಮದ್ದು ಸ್ಫೋಟಗೊಂಡಿದೆ. ದಂಪತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕುಕ್ಕರ್ ತಂದ ಆತಂಕ; ಬ್ಯಾಗ್ ಸ್ಫೋಟಗೊಂಡ ಸ್ಥಳದ ಸಮೀಪ ಕುಕ್ಕರ್ ಕಂಡು ಬಂದಿದ್ದು ಆತಂಕಕ್ಕೆ ಕಾರಣವಾಗಿತ್ತು. ಬ್ಯಾಗ್ ಹಾವೇರಿ ಜಿಲ್ಲೆಯ ಕೊಪ್ಪರಸಿಕೊಪ್ಪ ಗ್ರಾಮದ ಉಮೇಶ್ ಮತ್ತು ರೂಪಾ ದಂಪತಿಗೆ ಸೇರಿದ್ದು. ಇವರು ಆಂಟನಿ ಎಂಬುವವರ ಅಂಗಡಿಯಲ್ಲಿ ಬೆಡ್‌ಶೀಟ್ ಖರೀದಿ ಮಾಡಿದ್ದರು.
ಅರ್ಧಗಂಟೆ ಬಿಟ್ಟು ಬರುತ್ತೇನೆ ಎಂದು ಬ್ಯಾಗ್ ಅಲ್ಲೇ ಇಟ್ಟು ದಂಪತಿಗಳು ಸಂತೆಗೆ ಹೋಗಿದ್ದರು. ರೂಪಾ ಮತ್ತು ಉಮೇಶ್ ಪರಿಚಿತರಾದ ಕಾರಣ ಬ್ಯಾಗ್ ಅಲ್ಲೇ ಇಟ್ಟು ಹೋಗಲು ಆಂಟನಿ ಸಹ ಒಪ್ಪಿದ್ದ. ಆದರೆ ಕೆಲವೇ ನಿಮಿಷಗಳಲ್ಲಿ ಬ್ಯಾಗ್ ಸ್ಫೋಟಗೊಂಡ ಕಾರಣ ಇಬ್ಬರು ಗಾಯಗೊಂಡಿದ್ದಾರೆ.
ಘಟನೆ ಬಗ್ಗೆ ಯಾರೂ ಸಹ ಆತಂಕ ಪಡಬೇಕಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈ ವಸ್ತುಗಳನ್ನು ದಂಪತಿಗಳು ಎಲ್ಲಿಂದ ಖರೀದಿ ಮಾಡಿದರು ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications