ಚಿತ್ರಗಳು : ಶಿವಮೊಗ್ಗದಲ್ಲಿ ಅಮಿತ್ ಶಾ ರೋಡ್ ಶೋ
ಶಿವಮೊಗ್ಗ, ಮಾರ್ಚ್ 26 : 'ಕರ್ನಾಟಕದಿಂದ ಕಾಂಗ್ರೆಸ್ ತೊಲಗಬೇಕು. ರಾಜ್ಯ ಕಾಂಗ್ರೆಸ್ ಮುಕ್ತವಾಗಬೇಕು' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆ ನೀಡಿದರು.
ಕರ್ನಾಟಕ ಪ್ರವಾದಲ್ಲಿರುವ ಅಮಿತ್ ಶಾ ಶಿವಮೊಗ್ಗ ನಗರದಲ್ಲಿ ಸೋಮವಾರ ಸಂಜೆ ರೋಡ್ ಶೋ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿನ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ ರೋಡ್ ಶೋ ಆರಂಭಿಸಿದರು. ಗಾಂಧಿ ಬಜಾರ್ ಮಾರ್ಗವಾಗಿ ರೋಡ್ ಶೋ ಶಿವಪ್ಪನಾಯಕ ವೃತ್ತ ತಲುಪಿತು. ಅಲ್ಲಿ ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನೆಹರೂ ರಸ್ತೆಯಲ್ಲಿ ಸಾಗಿ ಗೋಪಿ ಸರ್ಕಲ್‌ನಲ್ಲಿ ರೋಡ್ ಶೋ ಅಂತ್ಯವಾಯಿತು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 'ಕರ್ನಾಟಕ ಕಾಂಗ್ರೆಸ್ ಮುಕ್ತವಾಗಬೇಕು. ಕರ್ನಾಟಕದಿಂದ ಕಾಂಗ್ರೆಸ್ ಪಕ್ಷವನ್ನು ತೊಲಗಿಸಿ' ಎಂದು ಕರೆ ನೀಡಿದರು.

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, 'ಸಿದ್ದರಾಮಯ್ಯ ರಾಜ್ಯದ ಜನರ ಹಿತ ಮರೆತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಮುಕ್ತವಾಗಲಿದೆ. ಬಿಜೆಪಿ 150 ಸೀಟು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ' ಎಂದರು.
ರೋಡ್ ಶೋ ಬಳಿಕ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ಅಮಿತ್ ಶಾ ಭೋಜನ ಸವಿಯಲಿದ್ದಾರೆ. ಕೆ.ಎಸ್.ಈಶ್ವರಪ್ಪ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ಮಾತ್ರ ಅಮಿತ್ ಶಾ ಜೊತೆ ಊಟ ಮಾಡಲಿದ್ದು, ಈ ಡಿನ್ನರ್ ಕುತೂಹಲಕ್ಕೆ ಕಾರಣವಾಗಿದೆ.
ಅಮಿತ್ ಶಾ ಎರಡು ದಿನಗಳ ಭೇಟಿಗಾಗಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಮಂಗಳವಾರ ಅವರು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.












Click it and Unblock the Notifications