Covid Scam: ಯತ್ನಾಳ್ ಆರೋಪಕ್ಕೆ ಬಿಜೆಪಿ ಮೊದಲು ಉತ್ತರ ಕೊಡಲಿ, ನಂತರ ಮುಡಾ ಹಗರಣ- ಎಂ.ಬಿ.ಪಾಟೀಲ್
ಶಿವಮೊಗ್ಗ ಆಗಸ್ಟ್ 10: ಯತ್ನಾಳ್ ಆರೋಪಕ್ಕೆ ಮೊದಲು ಉತ್ತರ ಕೊಡಲಿ, ನಂತರ ಮುಡಾ ಹಗರಣದ ಬಗ್ಗೆ ಮಾತನಾಡಲಿ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿಂದು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಹಗರಣ ಮಾಡಿಲ್ಲ. ಬಿಜೆಪಿಯವರು ವಿನಾಃ ಕಾರಣ ಹೋರಾಟ ಮಾಡ್ತಿದ್ದಾರೆ. 40 ವರ್ಷದ ರಾಜಕಾರಣದಲ್ಲಿ ಸಿದ್ದರಾಮಯ್ಯ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ದೇವರಾಜ್ ಅರಸು ನಂತರ ಒಬಿಸಿ ಸಮುದಾಯದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಬಿಜೆಪಿಯವರಿಗೆ ಇದು ಸಹಿಸಲು ಆಗ್ತಿಲ್ಲ' ಎಂದಿದ್ದಾರೆ.

ಬಿಜೆಪಿಯವರು ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮುಡಾ ಹಗರಣ ನಡೆದಾಗ ಬಿಜೆಪಿಯವರೇ ಅಧ್ಯಕ್ಷರಾಗಿದ್ದರು. ಅವರ ಪಕ್ಷದ ಶಾಸಕರೇ ಇದ್ದರು. ಮುರುಗೇಶ ನಿರಾಣಿ, ಕುಮಾರಸ್ವಾಮಿ ವಿರುದ್ದ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಆ ಪ್ರಕರಣ ಏನಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಕೋವಿಡ್ ವೇಳೆ ಎರಡು ಸಾವಿರ ಕೋಟಿ ಹಗರಣ ಆಗಿದೆ. ಯಡಿಯೂರಪ್ಪ, ಸುಧಾಕರ್ ಹಗರಣ ಮಾಡಿದ್ದಾರೆ ಅಂತಾ ಅವರ ಪಕ್ಷದವರೇ ಆದ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡ್ತಾರೆ. ವಿಜಯೇಂದ್ರ ಮಾರಿಷಸ್ ಗೆ 10 ಸಾವಿರ ಕೋಟಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರದ್ದೇ ಪಕ್ಷದ ಯತ್ನಾಳ್ ಆರೋಪ ಮಾಡ್ತಾರೆ. ಯತ್ನಾಳ್ ಆರೋಪಕ್ಕೆ ಮೊದಲು ಉತ್ತರ ಕೊಡಲಿ ಎಂದು ಗುಡುಗಿದ್ದಾರೆ.
ನಾವು ಸಹ ಹೋರಾಟ ಮಾಡ್ತೇವೆ, ನ್ಯಾಯಾಂಗ ಹೋರಾಟ ಮಾಡ್ತೇವೆ. ಬಿಜೆಪಿಯವರ ವಿರುದ್ದ ಜನರ ಬಳಿ ಹೋಗ್ತೇವೆ. ಅವರ ಕಾಲದಲ್ಲಿ 25 - 30 ಹಗರಣ ನಡೆದಿವೆ ಅದನ್ನು ಜನರ ಮುಂದೆ ತಿಳಿಸುತ್ತೇವೆ ಎಂದಿದ್ದಾರೆ.
ಇನ್ನೂ ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆ ವಿಚಾರದ ಬಗ್ಗೆ ಮಾತನಾಡಿದ ಅವರು, ವಿಎಸ್ ಐಎಲ್ ಕಾರ್ಖಾನೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಲ್ಲವೂ ಸರಿ ಹೋಗುವ ನಿರೀಕ್ಷೆ ಇದೆ ಎಂದರು.
ಅಲ್ಲದೆ ಇತ್ತೀಚೆಗೆ ಮತ್ತೆ ತಮ್ಮದೇ ಆದ ಪಕ್ಷದ ವಿರುದ್ಧ ಯತ್ನಾಳ್ ಕಿಡಿ ಕಾರಿದ್ದರು. 'ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರು ಸಾಲು ಸಾಲು ಹಗರಣಗಳನ್ನು ಮಾಡುತ್ತಿದ್ದರೂ ಅವುಗಳನ್ನು ಬಯಲಿಗೆಳೆದಯ, ಸರ್ಕಾರವನ್ನು ಸಮರ್ಥವಾಗಿ ಕಟ್ಟಿಹಾಕುವಲ್ಲಿ ಪ್ರತಿಪಕ್ಷವಾಗಿ ಬಜೆಪಿ ವಿಫಲವಾಗಿದೆ' ಎಂದು ತಮ್ಮದೇ ಪಕ್ಷದ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದರು. ಯತ್ನಾಳ್ ಆರೋಪಗಳು ಕಾಂಗ್ರೆಸ್‌ಗೆ ಅಸ್ತ್ರವಾಗಿವೆ.












Click it and Unblock the Notifications