ಚೆಕ್ ಪೋಸ್ಟ್ ಕಣ್ತಪ್ಪಿಸಿ ಶಿಕಾರಿಪುರಕ್ಕೆ ಬಂದ ಬೈಕ್ ಗಳ ವಶ
ಶಿವಮೊಗ್ಗ, ಮೇ 6: ಯಾವುದೇ ಅಧಿಕೃತ ಪಾಸ್ ಹೊಂದಿರದೇ ಶಿವಮೊಗ್ಗ ಜಿಲ್ಲಾ ಸರಹದ್ದಿನ ಚೆಕ್ ಪೋಸ್ಟ್ ಮೂಲಕ ಹಾದು ಹೋಗುವ ಮುಖ್ಯ ರಸ್ತೆಯಲ್ಲಿ ಬರದೇ ಪೊಲೀಸರ ಕಣ್ತಪ್ಪಿಸಿ ಬೇರೆ ರಸ್ತೆಯ ಮೂಲಕ ಶಿಕಾರಿಪುರಕ್ಕೆ ಬರುತ್ತಿದ್ದ 3 ದ್ವಿಚಕ್ರ ವಾಹನಗಳ ವಶಪಡಿಸಿಕೊಳ್ಳಲಾಗಿದೆ.
ಶಿಕಾರಿಪುರ ತಾಲ್ಲೂಕಿಗೆ ನೆರೆ ಜಿಲ್ಲೆ ಹಾವೇರಿಯಿಂದ ಯಾವುದೇ ಅಧಿಕೃತ ಪಾಸ್ ಇಲ್ಲದೇ ಪೊಲೀಸರ ಕಣ್ ತಪ್ಪಿಸಿ ಗುಳೇದಹಳ್ಳಿ ಮತ್ತು ಮಾರವಳ್ಳಿ ಗ್ರಾಮದ ಒಳ ರಸ್ತೆಗಳ ಮೂಲಕ ದ್ವಿಚಕ್ರ ವಾಹನಗಳಲ್ಲಿ ಬಂದಿರುವ ಖಚಿತ ಮಾಹಿತಿಯ ಮೇರೆಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ರವಿ ಕುಮಾರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.
ಈ ಸಂದರ್ಭದಲ್ಲಿ ಯಾವುದೇ ಅಧಿಕೃತ ಪಾಸ್ ಇಲ್ಲದೇ ಶಿವಮೊಗ್ಗ ಜಿಲ್ಲೆಗೆ ಬಂದಿರುವ ಒಟ್ಟು 3 ದ್ವಿಚಕ್ರ ವಾಹನಗಳು ಮತ್ತು 6 ಜನರನ್ನು ವಶಕ್ಕೆ ಪಡೆದು ಕಾನೂನುಕ್ರಮಕ್ಕೆ ಮುಂದಾಗಿದ್ದಾರೆ.
ಯಾವುದೇ ಜಿಲ್ಲೆಯವರು ಶಿವಮೊಗ್ಗ ಜಿಲ್ಲೆಗೆ ಒಳ ಪ್ರವೇಶಿಸುವಾಗ ಅಧಿಕೃತ ಪಾಸ್ ನ್ನು ಹೊಂದಿರುವುದು ಕಡ್ಡಾಯ. ಪಾಸ್ ಇಲ್ಲದೇ ಸಂಚರಿಸುವ ವ್ಯಕ್ತಿಗಳನ್ನು ದಿಢೀರ್ ಆಗಿ ವಾಹನಗಳನ್ನು ತಡೆದು ಪರಿಶಿಲಿಸಿದಾಗ ಅವರುಗಳು ಬೇರೆ ಜಿಲ್ಲೆಯವರಾಗಿದ್ದು, ಅಧಿಕೃತ ಪಾಸ್ ಗಳನ್ನು ಹೊಂದಿರದೇ ಇದ್ದಲ್ಲಿ, ಅಂತಹವರ ವಿರುದ್ದ ಕಾನೂನು ರೀತ್ಯಾ ಮುಂದಿನ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ತಹಶೀಲ್ದಾರ್ ಎಂ.ಪಿ ಕವಿರಾಜ್ ತಿಳಿಸಿದ್ದಾರೆ.