ಶಿವಮೊಗ್ಗ; ರಸ್ತೆಗೆ ಪುನೀತ್ ರಾಜ್ಕುಮಾರ್ ಹೆಸರು ನಾಮಕರಣ
ಶಿವಮೊಗ್ಗ, ಡಿಸೆಂಬರ್ 18; ಕರ್ನಾಟಕದ ರತ್ನ, ಅಭಿಮಾನಿಗಳ ಪಾಲಿನ ಅಪ್ಪು ನೆನೆಪು ಕನ್ನಡಿಗರ ಮನದಲ್ಲಿ ಸದಾ ಹಸಿರು. ಡಾ. ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿ ಎರಡು ವರ್ಷಗಳು ಕಳೆದವು. ಆದರೆ ಬೆಂಗಳೂರು ಸೇರಿದಂತೆ ಯಾವುದೇ ನಗರ, ಪಟ್ಟಣಕ್ಕೂ ಹೋದರೂ ಸಹ ಅಪ್ಪು ಫೋಟೋ ನಿಮ್ಮನ್ನು ಸ್ವಾಗತಿಸುತ್ತದೆ.
ಡಾ. ಪುನೀತ್ ರಾಜ್‍ಕುಮಾರ್ ಪ್ರತಿಮೆ ಸ್ಥಾಪನೆ ಮಾಡಿ, ರಸ್ತೆಗೆ ಅವರ ಹೆಸರು ಇಟ್ಟು, ಹೋಟೆಲ್‌ಗಳಿಗೆ ಅವರ ಹೆಸರು ಇಡುವ ಮೂಲಕ ಅಪ್ಪು ನೆನಪು ಸದಾ ಇರುತವಂತೆ ಅಭಿಮಾನಿಗಳು ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬೆಂಗಳೂರು ನಗರದ ರಸ್ತೆಯೊಂದಕ್ಕೆ ಪುನೀತ್ ರಾಜ್ಕುಮಾರ್ ಹೆಸರು ನಾಮಕರಣ ಮಾಡಲಾಗಿದೆ.

ಭದ್ರಾವತಿ ನಗರ ಸಭೆ ಪ್ರಸ್ತಾವನೆ; ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಸಭಾ ವ್ಯಾಪ್ತಿಯ ವಾರ್ಡ್ ನಂ.06ರ ಕೆಎಸ್‌ಆರ್‌ಟಿಸಿ ಬಸ್ ಡಿಪೋ ವೃತ್ತದ ಬಳಿಯಿಂದ ರಂಗಪ್ಪ ವೃತ್ತದವರೆಗಿನ ರಸ್ತೆಗೆ ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ನವೆಂಬರ್ 25ರಂದು ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ನಗರಸಭೆ ಈ ಕುರಿತು ಪ್ರಕಟಣೆಯನ್ನು ಹೊರಡಿಸಿದೆ. ಸಾರ್ವಜನಿಕರು ನಾಮಕರಣ ಮಾಡುವ ಬಗ್ಗೆ ತಮ್ಮ ಸಲಹೆ ಸೂಚನೆ ಅಥವಾ ತಕರಾರು/ ಆಕ್ಷೇಪಣೆಗಳಿದ್ದಲ್ಲಿ ಜನವರಿ 16ರೊಳಗೆ ಭದ್ರಾವತಿ ನಗರಸಭೆ, ಪೌರಾಯುಕ್ತರು ಇವರಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಪ್ರಕಟಣೆ ಹೇಳಿದೆ.
ಶಿವಮೊಗ್ಗ ಜಿಲ್ಲೆಯ ತಾಲೂಕುಗಳಲ್ಲಿ ಒಂದು ಭದ್ರಾವತಿ. ಈಗ ಭದ್ರಾವತಿ ನಗರಸಭೆ ನಗರದ ಪ್ರಮುಖ ರಸ್ತೆಗೆ ಅಪ್ಪು ಹೆಸರು ಇಡಲು ತೀರ್ಮಾನಿಸಿದೆ. ಕನ್ನಡ ಚಿತ್ರರಂಗಕ್ಕೆ ಹಲವು ಕಲಾವಿದರನ್ನು ಕೊಡುಗೆಯಾಗಿ ನೀಡಿದ ಭದ್ರಾವತಿ ಈಗ ಪಟ್ಟಣದಲ್ಲಿ ಅಪ್ಪು ಹಸರು ಅಜರಾಮರವಾಗಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರು ನಗರದಲ್ಲಿ ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 12 ಕಿ. ಮೀ. ಹೊರ ವರ್ತುಲ ರಸ್ತೆಗೆ ಪುನೀತ್ ರಾಜ್ಕುಮಾರ್ ಹೆಸರು ನಾಮಕರಣ ಮಾಡಲಾಗಿದೆ. ನಾಯಂಡಹಳ್ಳಿ ಜಂಕ್ಷನ್‌ನಿಂದ ವೆಗಾ ಸಿಟಿ ಮಾಲ್ ಬನ್ನೇರುಘಟ್ಟ ರಸ್ತೆ ತನಕದ ರಸ್ತೆ ಇದಾಗಿದೆ.
2021ರ ಅಕ್ಟೋಬರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಬಳಿಕ ಕರ್ನಾಟಕ ಸರ್ಕಾರ ಮರಣೋತ್ತರವಾಗಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಬೆಂಗಳೂರು ನಗರದ ಯಾವುದೇ ರಸ್ತೆಗೆ ಸಾಗಿದರೂ ಸಹ ಅಪ್ಪು ಫೋಟೋ ಕಾಣುತ್ತದೆ. ಅಷ್ಟು ಅಭಿಮಾನವನ್ನು ಜನರು ಇಟ್ಟುಕೊಂಡಿದ್ದಾರೆ.
ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿ, ನಗರಸಭೆ ಹೀಗೆ ಸ್ಥಳೀಯ ಆಡಳಿತಗಳು ತಮ್ಮ ವ್ಯಾಪ್ತಿಯ ಪ್ರದೇಶಗಳ ರಸ್ತೆಗೆ ಹೆಸರು ಇಡುವ ಕುರಿತು ಮೊದಲು ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಬೇಕು, ಬಳಿಕ ಆ ಕುರಿತು ಪ್ರಕಟಣೆ ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು.
ಭದ್ರಾವತಿ ನಗರಸಭೆ ಸಹ ಸಾಮಾನ್ಯ ಸಭೆಯಲ್ಲಿ ರಸ್ತೆಗೆ ಪುನೀತ್ ರಾಜ್ಕುಮಾರ್ ಹೆಸರು ಇಡುವ ಕುರಿತು ನಿರ್ಣಯ ಕೈಗೊಂಡಿದೆ. ಯಾವುದೇ ವಿರೋಧವಿಲ್ಲದೇ ಈ ಪ್ರಸ್ತಾವನೆಗೆ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಈಗ ಪ್ರಕಟಣೆ ಹೊರಡಿಸಲಾಗಿದೆ. ಆಕ್ಷೇಪಣೆ ಬಂದರೆ ಅದನ್ನು ಬಗೆಹರಿಸಬೇಕು. ಇಲ್ಲವಾದರೆ ದಿನಾಂಕವೊಂದನ್ನು ನಿಗದಿ ಮಾಡಿ ರಸ್ತೆಗೆ ಹೆಸರು ಇಡಬಹುದಾಗಿದೆ.












Click it and Unblock the Notifications