ಭದ್ರಾವತಿಯ ಪ್ರಮುಖ ರಸ್ತೆ, ಸರ್ಕಲ್‌ಗಳ ಅಗಲೀಕರಣ
ಶಿವಮೊಗ್ಗ, ಫೆಬ್ರವರಿ 02: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಪ್ರಮುಖ ರಸ್ತೆಗಳು ಮತ್ತು ಸರ್ಕಲ್‌ಗಳನ್ನು ಅಗಲೀಕರಣ ಮಾಡಲಾಗುತ್ತದೆ. ಶೀಘ್ರದಲ್ಲೇ ಈ ಕಾಮಗಾರಿಗಳು ಆರಂಭವಾಗಲಿವೆ ಎಂದು ನಗರಸಭೆ ಆಯುಕ್ತ ಮನೋಹರ್ ಹೇಳಿದ್ದಾರೆ.
ಮಂಗಳವಾರ ಸರ್. ಎಂ. ವಿ. ಸಭಾಂಗಣದಲ್ಲಿ ನಗರಸಭೆ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಆಯುಕ್ತರು, "ಭದ್ರಾವತಿ ಪಟ್ಟಣದ ರಂಗಪ್ಪ ಸರ್ಕಲ್, ಮಾಧವಾಚಾರ್ ಸರ್ಕಲ್ ಸೇರಿದಂತೆ ವಿವಿಧ ವೃತ್ತಗಳ ಅಗಲೀಕರಣ ಮಾಡಲಾಗುತ್ತದೆ" ಎಂದರು.
"ಚನ್ನಗಿರಿ ರಸ್ತೆಯ ಅಗಲೀಕರಣ ಕಾರ್ಯವು ನಡೆಯಲಿದೆ. ಇದರ ಜೊತೆಗೆ ಇನ್ನಷ್ಟು ರಸ್ತೆ, ಸರ್ಕಲ್‌ಗಳನ್ನು ಅಗಲೀಕರಣ ಮಾಡಿ, ಅಭಿವೃದ್ಧಿಪಡಿಸಲಾಗುತ್ತದೆ" ಎಂದು ತಿಳಿಸಿದರು.

ಒಳ ಚರಂಡಿ; ವಿಜಯನಗರ ಸೇರಿದಂತೆ ಪಟ್ಟಣದ 5 ಕಡೆಯಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. 2022ಕ್ಕೆ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಒಂದು ವರ್ಷ ಮೊದಲೇ ಕಾಮಗಾರಿ ಪೂರ್ಣವಾಗಿದೆ. ಇದರ ಜೊತೆ 7.2 ಎಂಎಲ್ಡಿ ಸಾಮರ್ಥ್ಯದ ಎಸ್ಟಿಪಿ ಘಟಕ ನಿರ್ಮಿಸಲಾಗಿದೆ. ಶೀಘ್ರದಲ್ಲೇ ಇವುಗಳನ್ನು ಉದ್ಘಾಟಿಸಲಾಗುತ್ತದೆ.
ಜನರ ಸಲಹೆ ಸ್ವೀಕಾರ: ಬಜೆಟ್ ಸಂಬಂಧ ಸಾರ್ವಜನಿಕರಿಂದ ಸಲಹೆ ಸ್ವೀಕರಿಸಲಾಯಿತು. ಬಸವೇಶ್ವರ ಸರ್ಕಲ್‌ನಲ್ಲಿ ಸಂಜೆ ವೇಳೆ ತಿಂಡಿ ತಿನಿಸು ಗಾಡಿಗಳಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವ ಕುರಿತು ಸಭೆಯಲ್ಲಿದ್ದವರು ಗಮನ ಸೆಳೆದರು.
ನಗರ ಸಭೆ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗದಂತೆ ತಡೆಯುವಂತೆ ಒಬ್ಬರು ಮನವಿ ಮಾಡಿದರು. ನಗರದ ವಿವಿಧೆಡೆ ಅನಗತ್ಯವಾಗಿ ಹೈಮಾಸ್ಕ್ ದೀಪಗಳನ್ನು ಅಳವಡಿಸಲಾಗಿದ್ದು, ಈ ಪರಿಪಾಠ ಮುಂದುವರೆಸದಂತೆ ಮನವಿ ಮಾಡಲಾಯಿತು.












Click it and Unblock the Notifications