Vande Bharat: ಶಿವಮೊಗ್ಗದಿಂದ ವಂದೇ ಭಾರತ್ ರೈಲು ಯಾವಾಗ?
ಶಿವಮೊಗ್ಗ, ಫೆಬ್ರವರಿ 27; ಕರ್ನಾಟಕದ ವಿವಿಧ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸುತ್ತಿವೆ. ಕರಾವಳಿ ಭಾಗಕ್ಕೂ ರೈಲು ಸಂಪರ್ಕ ಸಿಕ್ಕಿದೆ. ಆದರೆ ಮಲೆನಾಡು ಭಾಗಕ್ಕೆ ಇನ್ನೂ ವಂದೇ ಭಾರತ್ ರೈಲುಗಳು ಬಂದಿಲ್ಲ. ಶಿವಮೊಗ್ಗ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಬೇಡಿಕೆ ಇದೆ.
ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ವೇದಿಕೆ ಮೂಲಕ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಗೆ ಚಾಲನೆ ನೀಡಿದರು. ಈ ಕಾರ್ಯಕ್ರಮಲ್ಲಿ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಮಾತನಾಡಿದ ಬಿ. ವೈ. ರಾಘವೇಂದ್ರ, "ಈ ಯೋಜನೆ ಮುಖ್ಯ ಉದ್ದೇಶ ರೈಲು ನಿಲ್ದಾಣಗಳನ್ನು ಅತ್ಯಾಧುನಿಕ ತಂತ್ರಜ್ಞಾನ , ಆರೋಗ್ಯ ಕೇಂದ್ರ, ಹಿರಿಯರಿಗೆ ಅನುಕೂಲ, ವ್ಯಾಪಾರ ವಹಿವಾಟು ಸೇರಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿದೆ. ರೈಲು ನಿಲ್ದಾಣಗಳನ್ನು ಸುಂದರಗೊಳಿಸುವುದರ ಮೂಲಕ ದೇಶಕ್ಕೆ ಹೆಚ್ಚಿನ ಮೆರಗು ನೀಡಲಾಗುತ್ತದೆ" ಎಂದರು.
"ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ 10 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಸ್ವತಂತ್ರ ಭಾರತದಲ್ಲಿ ಈವರೆಗೂ ಆಗಿರುವುದಿಲ್ಲ. ನಾವು ಹೊರ ದೇಶದ ಅಭಿವೃದ್ಧಿಯನ್ನು ಹೊಗಳುತ್ತಿದ್ದ ಕಾಲ ಹಿಂದೆ ಇತ್ತು .ಆದರೆ ಈಗ ಪರಿಸ್ಥತಿ ಬದಲಾಗಿದೆ. ಭಾರತದಲ್ಲಿ ಈಗಾಗಲೇ 68 ವಂದೇ ಭಾರತ್ ರೈಲುಗಳು ಆರಂಭವಾಗಿದ್ದು ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಇದು ಸ್ವದೇಶಿ ನಿರ್ಮಿತ ಎಂಬುದು ನಮ್ಮ ದೇಶದ ಹೆಮ್ಮೆ" ಎಂದು ಹೇಳಿದರು.
ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು: "ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಗೆ ಶಿವಮೊಗ್ಗ ರೈಲ್ವೆ ನಿಲ್ದಾಣ ಕೂಡ ಸೇರಿಕೊಂಡಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ನಮ್ಮ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಪ್ರತಿ ನಿತ್ಯ 15 ರಿಂದ 18 ಸಾವಿರ ಜನರು ಪ್ರಯಾಣವನ್ನು ನಡೆಸುತ್ತಿದ್ದಾರೆ" ಎಂದರು.
"ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದಲೂ ವಂದೇ ಭಾರತ್ ರೈಲು ಆರಂಭಿಸಲಾಗುವುದು. ಪಕ್ಕದ ಭದ್ರಾವತಿಯ ರೈಲ್ವೆ ನಿಲ್ದಾಣವನ್ನು ಕೂಡ ಮುಂದಿನ ಹಂತದಲ್ಲಿ ಈ ಯೋಜನೆಗೆ ಜೋಡಿಸಲಾಗುವುದು. ಪ್ರಸ್ತುತ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ರೂ. 24.37 ಕೋಟಿಯನ್ನು ನೀಡಿದ್ದು ಸಾಗರ ರೈಲು ನಿಲ್ದಾಣಕ್ಕೆ ರೂ. 26.44 ಕೋಟಿ ಹಾಗೂ ತಾಳಗುಪ್ಪ ರೂ. 27.86 ಕೋಟಿ ಅನುದಾನವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಆನಂದಪುರ,ಕುಂಸಿ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು" ಎಂದು ಸಂಸದರು ಹೇಳಿದರು.
ಶಿವಮೊಗ್ಗ ಮಲೆನಾಡ ಹೆಬ್ಬಾಗಿಲು. ರಾಜಧಾನಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಜನ ಶತಾಬ್ದಿ ರೈಲು, ಬಸ್, ವಿಮಾನ ಸಂಪರ್ಕವಿದೆ. ಆದರೆ ಎರಡು ನಗರಗಳ ನಡುವಿನ ಪ್ರಯಾಣ ಸಮಯವನ್ನು ಉಳಿಸಲು ವಂದೇ ಭಾರತ್ ರೈಲು ಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಸಂಸದರಾದ ಬಿ. ವೈ. ರಾಘವೇಂದ್ರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸುವ ಕುರಿತು ಮನವಿಯನ್ನು ಮಾಡಿದ್ದರಾರೆ. ಅಲ್ಲದೇ ಶಿವಮೊಗ್ಗ ನಗರದ ಹೊರವಲಯದ ಕೋಟೆಗಂಗೂರು ಎಂಬಲ್ಲಿ ರೈಲ್ವೆ ಡಿಪೋ ನಿರ್ಮಾಣವಾಗುತ್ತಿದೆ ಇಲ್ಲಿ ವಂದೇ ಭಾರತ್ ರೈಲಿನ ನಿರ್ವಹಣೆಗೆ ಅಗತ್ಯವಾದ ವ್ಯವಸ್ಥೆ ಮಾಡುವಂತೆಯೂ ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರುತ್ತದೆ. ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಮತ್ತು ರೈಲು ನಿಲ್ದಾಣದಲ್ಲಿ ಒಟ್ಟು 4 ಮಾರ್ಗ ನಿರ್ಮಾಣವಾಗುತ್ತಿದೆ. ಇಲ್ಲಿ ವಂದೇ ಭಾರತ್ ರೈಲು ನಿರ್ವಹಣೆಗೆ ಸಹ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ.
ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಬರುವ ತನಕ ಕೆಎಸ್ಆರ್ ಬೆಂಗಳೂರು-ಧಾರವಾಡ-ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲಿಗೆ ಬೀರೂರಿನಲ್ಲಿ ನಿಲುಗಡೆ ನೀಡಬೇಕು ಎಂದು ರೈಲ್ವೆ ಇಲಾಖೆ ಮುಂದೆ ಬೇಡಿಕೆ ಇಡಲಾಗಿದೆ. ಇದಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.












Click it and Unblock the Notifications